ತೆಲಂಗಾಣ: ಕಾಂಗ್ರೆಸ್ಸಿಗೇ ರಣವೀಳ್ಯ ಕೊಟ್ಟ ಸಿಎಂ ರೆಡ್ಡಿ

ತನ್ಮೂಲಕ ಆಂಧ್ರ 'ಕೈ'ತಪ್ಪದಂತೆ ನೋಡಿಕೊಳ್ಳುವ ಜಾಣನಡೆಗೆ ಮುಂದಾಗಿದೆ. ಆದರೆ ಅದಾಗಲೇ ಇಟ್ ಈಸ್ ಟೂ ಲೇಟ್ ಎಂಬಂತಾಗಿದೆ ಆಂಧ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ. ತೆಲಂಗಾಣ ವಿಭಜನೆ ಕರ್ಣಕಠೋವಾಗಿದ್ದು, ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯಂತೂ ಅದಾಗಲೇ ಪಕ್ಷದಿಂದ ವಿಮುಖಗೊಂಡಿದ್ದಾರೆ.
ಕೇಂದ್ರ ಕಾಂಗ್ರೆಸ್ ನಾಯಕರಿಗಷ್ಟೇ ರಾಜ್ಯ ವಿಭಜನೆ ಬೇಕಾಗಿರುವುದು; ತನಗಲ್ಲ. ತಾನು ತೆಲಂಗಾಣ ವಿಭಜನೆ ವಿರೋಧಿ ಎಂಬುದನ್ನು ಸಾಬೀತುಪಡಿಸುವುದು ಸಿಎಂ ರೆಡ್ಡಿಗೆ ತಕ್ಷಣಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿಯೇ ಅವರು ಈ ಹಂತದಲ್ಲಿಯೂ ಸೀಮಾಂಧ್ರ ಹಿತಾಸಕ್ತಿ ಕಾಯ್ದುಕೊಳ್ಳಲು ಲೆಕ್ಕಾಚಾರ ಹಾಕುತ್ತಿದ್ದಾರೆ.
ಸೀಮಾಧ್ರದಲ್ಲಿ ತಮ್ಮ ರಾಜಕೀಯ ಹಿತಾಸಕ್ತಿ ಕಾಯ್ದುಕೊಳ್ಳಲು ಬದ್ಧರಾಗಿರುವ ಸಿಎಂ ರೆಡ್ಡಿ ಆ ಭಾಗದ ಕಾಂಗ್ರೆಸ್ ಶಾಸಕರು/ ಸಂಸದರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಮಾತನ್ನು ಮೀರಿ ಒಂದು ವೇಳೆ ಕೇಂದ್ರ ಕಾಂಗ್ರೆಸ್ ತೆಲಂಗಾಣವನ್ನು ವಿಭಜಿಸುವ ನಿರ್ಧಾರಕ್ಕೇ ಅಂಟಿಕೊಂಡರೆ ಅದನ್ನು ಸುಪ್ರೀಂಕೋರ್ಟಿನಲ್ಲೂ ಪ್ರಶ್ನಿಸುವ ಉಮೇದಿಯಲ್ಲಿದ್ದಾರೆ.
ಅದಕ್ಕಾಗಿ ಅಗತ್ಯ ರಾಜಕೀಯ ಬೆಂಬಲ ಪಡೆಯಲೂ ಸಹ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ತಮ್ಮದೇ ಆದ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಅಗತ್ಯಬಿದ್ದಲ್ಲಿ ಚಂದ್ರಬಾಬು ನಾಯ್ಡು ಮತ್ತು ವೈಎಸ್ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿಯತ್ತಲೂ ಸಹಾಯ 'ಹಸ್ತ' ಚಾಚಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ತೆಲಂಗಾಣ ವಿಭಜನೆಗೆ ಬಿಜೆಪಿ ಸಹಮತವಿಲ್ಲದಿರುವುದು ರಾಜಕೀಯ ಧ್ರುವೀಕರಣಕ್ಕೆ ಹೇತುವಾಗಿದೆ. ಇನ್ನು ನಟ, ಸಂಸದ ಚಿರಂಜೀವಿ ಮತ್ತೆ ಸೀಮಾಂಧ್ರ ಹಿತಾಸಕ್ತಿ ಕಾಯ್ದುಕೊಳ್ಳುವ ಮಾತನ್ನಾಡಿದ್ದು, ಮತ್ತೆ ರಾಜೀನಾಮೆ ಪ್ರಹಸನ ಶುರುವಿಟ್ಟುಕೊಂಡಿದ್ದಾರೆ. ಒಟ್ಟಾರೆ ಇದೆಲ್ಲಾ ಬೆಳವಣಿಗೆಗಳು ಕಾಂಗ್ರೆಸ್ಸಿನಲ್ಲಿ ಆತಂಕ ಹೆಚ್ಚಿಸಿದೆ.
ಇನ್ನು, ಮುಂದಿನ ವಾರದಿಂದ (ಡಿಸೆಂಬರ್ 12) ಆಂಧ್ರ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಸಾಕಷ್ಟು ಮಾರಾಮಾರಿಗೆ ಸಾಕ್ಷಿಯಾಗುವ ಲಕ್ಷಣಗಳು ಹೆಚ್ಚಾಗಿವೆ. ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷಿ ತೆಲಂಗಾಣ ವಿಧೇಯಕವನ್ನು ರಾಜ್ಯ ವಿಧಾನಸಭೆಯಲ್ಲೇ ಮಣ್ಣುಪಾಲು ಮಾಡಲು ಟಿಡಿಪಿ ಮತ್ತು ವೈಎಸ್ಸಾರ್ ಶಾಸಕರತ್ತ ಸಿಎಂ ರೆಡ್ಡಿ ಕೈಚಾಚಿರುವುದು ಕುತೂಹಲಕಾರಿಯಾಗಿದೆ.












Click it and Unblock the Notifications