ಅಮೆರಿಕ ಪತ್ನಿಯ ಸಾಯಿಸಿ ಆಟೋ ಚಾಲಕ ತಾನೂ ಸತ್ತ

ಏನಪ್ಪಾ ಅಂದರೆ ಅವಳಾಗೆ ಬಂದು ಯಃಕಶ್ಚಿತ್ ಆಟೋ ಡ್ರೈವರನನ್ನು ವರಿಸಿದ್ದಳು. ಆಮೇಲೆ ...
ಅಮೆರಿಕದ ಸಾಮಾಜಿಕ ಕಾರ್ಯಕರ್ತೆ ಎರಿನ್ ವೈಟ್ ಅಲಿಯಾಸ್ ಕಿರಣ್ ಶರ್ಮಾ (35) ಕಳೆದ ಸೆಪ್ಟೆಂಬರಿನಲ್ಲಿ ಆಗ್ರಾಕ್ಕೆ ಬಂದಿದ್ದಾಗ ಬಂಟಿ ಶರ್ಮಾ ಅಲಿಯಾಸ್ ಅಶೋಕ್ ಎಂಬ ಯುವಕನನ್ನು ಮೆಚ್ಚಿ, ಮದುವೆಯಾಗಿದ್ದಳು.
ಆದರೆ ಗುರುವಾರ ಸಾಯಂಕಾಲ ಬಂಟಿ ಶರ್ಮಾ ತನ್ನ ಹೆಂಡತಿ ಕಿರಣ್ ಶರ್ಮಾಳನ್ನು ಆಟೋದಲ್ಲಿ ಕರೆದೊಯ್ದು ತಿವಿದು ಸಾಯಿಸಿದ್ದಾನೆ. ಆಟೋದಿಂದ ಶವವನ್ನು ಬಿಸಾಕಿ, ರಾತ್ರಿ 8 ಗಂಟೆ ವೇಳೆಗೆ ಮನೆಗೆ ಮರಳಿದ್ದಾನೆ.
ಸಂಜಯನಗರದಲ್ಲಿ ತನ್ನ ಮನೆಗೆ ಮರಳಿದವನೇ ಬಂಟಿ ಶರ್ಮಾ, ರೂಮಿನಲ್ಲಿ ಬಾಗಿಲು ಹಾಕಿಕೊಂಡು ಗ್ಯಾಸ್ ಸಿಲಿಂಡರಿನಿಂದ ಗ್ಯಾಸನ್ನು ಹರಿಯಬಿಟ್ಟು, ಬೆಂಕಿ ಹಚ್ಚಿಕೊಂಡು ಸಜೀವ ದಹನಗೊಂಡಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ವಾನದಳದ ನೆರವಿನೊಂದಿಗೆ ಕಿರಣ್ ಶರ್ಮಾಳ ಶವವನ್ನೂ ಪತ್ತೆ ಹಚ್ಚಿ, ತನಿಖೆ ನಡೆಸಿದ್ದಾರೆ. ಜತೆಗೆ, ಕೇಂದ್ರ ಗೃಹ ಸಚಿವಾಲಯ ಮತ್ತು ಅಮೆರಿಕದ ರಾಯಭಾರಿ ಕಚೇರಿಗೂ ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹದಿಂದ ಬಂಟಿ ಶರ್ಮಾ ಈ ಕುಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಾಜ್ ಮಹಲ್ ಎದುರಿಗೇ ಕಾಣುವಂತೆ, ಖಾಸಗಿ ಹೋಟೆಲೊಂದರಲ್ಲಿ ಬಂಟಿ ಮತ್ತು ಎರಿನ್ ವೈಟ್ ಕಳೆದ ವರ್ಷ ಪ್ರೀತಿಸಿ, ಮದುವೆಯಾಗಿದ್ದರು.
'ಬಂಟಿ ಈಗಾಗಲೇ ಮದುವೆಯಾಗಿದ್ದಾನೆ. ಆದರೆ ಅದನ್ನು ತನ್ನಿಂದ ಬಚ್ಚಿಟ್ಟಿದ್ದ. ಅವನಿಗೆ ಇತ್ತೀಚಿನ ದಿನಗಳಲ್ಲಿ ದುಡ್ಡಿನಾಸೆ ಹೆಚ್ಚಾಗಿದೆ. ನನ್ನಿಂದ ದುಡ್ಡು ಕೀಳಲು ಯತ್ನಿಸುತ್ತಿದ್ದಾನೆ. ಹೊಡೆದೂ ಬಡಿದು ಮಾಡುತ್ತಾನೆ. ನನ್ನ ಸಂಸಾರವನ್ನು ಸರಿ ಮಾಡಿ' ಎಂದು ಕಿರಣ್ ಶರ್ಮಾ ಇತ್ತೀಚೆಗೆ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಹೋಗಿದ್ದಳು. ಸಲಹೆ ಬಳಿಕ, ಇಬ್ಬರ ನಡುವೆಯೂ ಸಂಧಾನವೇರ್ಪಟ್ಟು, ಪರಸ್ಪರ ಅನ್ಯೋನ್ಯತೆಯಿಂದಿದ್ದರು.
ಆದರೆ ಬಂಟಿ ಶರ್ಮಾನಲ್ಲಿದ್ದ ದುರುಳತನ ಮತ್ತೆ ಜಾಗೃತವಾಗಿದೆ. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿ, ಹತ್ಯೆಗಳಿಗೆ ಮುಂದಾಗಿದ್ದಾನೆ.
ಎರಿನ್ ವೈಟ್ ಅಲಿಯಾಸ್ ಕಿರಣ್ ಶರ್ಮಾ ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದಳು. ಯೋಗ ಕಲಿತಿದ್ದಳು. ಪ್ರೇಮಿ ಬಂಟಿ ಶರ್ಮಾನ ಜತೆಗೆ ಆಗ್ರಾದ ಸೊಬಗನ್ನು ಸವಿಯುತ್ತಾ ಆಗ್ರಾ ಪಟ್ಟಣದ ಸ್ಥಿತಿಗತಿಯನ್ನು ಸುಧಾರಿಸುವ ಕಾಯಕದಲ್ಲಿ ತೊಡಗಿದ್ದಳು. ಸಮಾಜ ಸೇವೆಯನ್ನು ಅತೀವವಾಗಿ ಪ್ರೀತಿಸುತ್ತಿದ್ದಳು.
ಜಸ್ಟ್ ಗುರುವಾರ ರಾತ್ರಿ ಸಾಯುವ ಮುನ್ನ ಕಿರಣ್ ಶರ್ಮಾ ಆಗ್ರಾದಲ್ಲಿ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ, Agra Sunder Hai ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಳು. ಆದರೆ ಪಾಪಿ ಬಂಟಿ ಶರ್ಮಾ ಬೇರೆಯದ್ದೇ ಯೋಜನೆ ರೂಪಿಸಿ, ಅವಳ ಸುಂದರ ಬದುಕು/ ಕನಸಿಗೆ ಇತಿಶ್ರೀ ಹಾಡಿದ್ದಾನೆ.












Click it and Unblock the Notifications