ಪಂಜಾಬ್ ನಂತರ ಛತ್ತೀಸ್‌ಗಢದ ಮೇಲೆ ಎಎಪಿ ಕಣ್ಣು
ನವದೆಹಲಿ, ಮಾರ್ಚ್ 20: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಆಮ್ ಆದ್ಮಿ ಪಕ್ಷ(ಎಎಪಿ) ಈಗ ಛತ್ತೀಸ್‌ಗಢದ ಮೇಲೆ ತನ್ನ ಕಣ್ಣು ಹಾಕಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಮುಂದಿನ ವರ್ಷ ಬುಡಕಟ್ಟು ಪ್ರಾಬಲ್ಯವಿರುವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.
ಹಿರಿಯ ಎಎಪಿ ನಾಯಕ ಮತ್ತು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು ಛತ್ತೀಸ್‌ಗಢಕ್ಕೆ ಎರಡು ದಿನಗಳ ಭೇಟಿಯನ್ನು ಕೈಗೊಂಡಿದ್ದು, ಪ್ರಸ್ತುತ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಸಿದ್ಧತೆಗಳಿಗೆ ಚಾಲನೆ ನೀಡಿದ್ದಾರೆ.
ಎಎಪಿಯ ಪೂರ್ವಾಂಚಲ ವಿಭಾಗದ ಉಸ್ತುವಾರಿ ಮತ್ತು ಬುರಾರಿ ಶಾಸಕ ಸಂಜೀವ್ ಝಾ ಅವರು ರಾಯ್ ಅವರೊಂದಿಗೆ ಛತ್ತೀಸ್‌ಗಢಕ್ಕೆ ತೆರಳಲಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ "ಕ್ರಿಯ ಯೋಜನೆ"ಯನ್ನು ರೂಪಿಸಲು ಮತ್ತು ರಾಜ್ಯದಲ್ಲಿ "ಬೃಹತ್" ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲು ರಾಯ್ ಅವರು ಎಎಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಭಾನುವಾರದಂದು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಪಕ್ಷದ ರಾಜ್ಯ ಕಚೇರಿಯನ್ನು ಉದ್ಘಾಟಿಸಿದ್ದಾರೆ.
ಸೋಮವಾರದಂದು ಪಂಜಾಬ್‌ನಲ್ಲಿ ಪಕ್ಷದ ಅದ್ಭುತ ವಿಜಯವನ್ನು ಸಂಭ್ರಮಿಸಲು ರಾಯ್‌ಪುರದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ನಡೆಸಲಿರುವ 'ವಿಜಯ್ ಯಾತ್ರೆ' (ವಿಜಯ ಮೆರವಣಿಗೆ) ನಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಭರ್ಜರಿ ಗೆಲುವು ದಾಖಲಿಸಿದೆ. ಆಡಳಿತಾರೂಢ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿದಳ (ಎಸ್‌ಎಡಿ) ಕೇವಲ ಮೂರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿಯು ಎರಡು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 1 ಹಾಗೂ ಸ್ವತಂತ್ರ್ಯ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಛತ್ತೀಸ್‌ಗಢ ಜನತೆ ಬದಲಾವಣೆ ಬಯಸಿದ್ದಾರೆ
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಮ್ಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಈ ಭೇಟಿಯಾಗಿದೆ. ನಮ್ಮ ವಿಜಯ ಯಾತ್ರೆಯ ಮೂಲಕ ನಾವು ನಮ್ಮ ಪಕ್ಷದ ಸಂದೇಶವನ್ನು ಜನಸಾಮಾನ್ಯರಿಗೆ ರವಾನಿಸುತ್ತೇವೆ ಎಂದು ತಮ್ಮ ಭೇಟಿಯ ಉದ್ದೇಶದ ಬಗ್ಗೆ ಕೇಳಿದಾಗ ಗೋಪಾಲ್ ಪಿಟಿಐಗೆ ತಿಳಿಸಿದರು.
ಎಎಪಿಯ ದೆಹಲಿ ಸಂಚಾಲಕರಾಗಿರುವ ರಾಯ್, ಮುಂದಿನ ವರ್ಷ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ, ಏಕೆಂದರೆ ರಾಜ್ಯದ ಜನರು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಬಗ್ಗೆ ನಿರಾಶೆಗೊಂಡಿದ್ದಾರೆ ಮತ್ತು "ಬದಲಾವಣೆ" ಬಯಸಿದ್ದಾರೆ.
ಛತ್ತೀಸ್‌ಗಢ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ನಂತರ 15 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದರೂ ಭರವಸೆಗಳನ್ನು ಈಡೇರಿಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಬದಲಾವಣೆಗಾಗಿ ಮತ ನೀಡಿ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ ಎಂದರು.

ಇದುವರೆಗಿನ ತನ್ನ ಮೂರೂವರೆ ವರ್ಷಗಳ ಆಡಳಿತದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದರು.
"ಕಾಂಗ್ರೆಸ್ ಆಂತರಿಕ ಜಗಳದಿಂದ ನಲುಗುತ್ತಿರುವಾಗ, ರಾಜ್ಯದ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ಬುಡಕಟ್ಟು ಜನರಲ್ಲಿ ತುಂಬಾ ನಿರಾಶೆ ಇದೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತವನ್ನು ನೋಡಿದ್ದಾರೆ. ಈಗ ಅವರು ಬದಲಾವಣೆಯನ್ನು ಬಯಸಿದ್ದಾರೆ" ಎಂದು ರಾಯ್ ಹೇಳಿದರು.
ಎಎಪಿ 2018 ರಲ್ಲಿ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳಲ್ಲಿ 85 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಆದರೆ ತನ್ನ ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿತ್ತು.












Click it and Unblock the Notifications