ಲಷ್ಕರ್ ಉಗ್ರ ಅಬು ಇಸ್ಮಾಯಿಲ್ ಅಮರನಾಥ ದಾಳಿಯ ಮಾಸ್ಟರ್ ಮೈಂಡ್
ಜಮ್ಮು ಮತ್ತು ಕಾಶ್ಮೀರ, ಜುಲೈ 11: ಅಮರನಾಥ ಯಾತ್ರಿಕರ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್ ಎಂದು ಗೊತ್ತಾಗಿದೆ. ಈತ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿದ್ದು ಲಷ್ಕರ್ ಇ ತಯ್ಯಾಬಾದ ಉಗ್ರನಾಗಿದ್ದಾನೆ.
ಇದೊಂದು ಪ್ರತೀಕಾರದ ದಾಳಿ ಎಂದು ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ. ಲಷ್ಕರ್ ಇ ತಯ್ಯಬಾದ ಬಷೀರ್ ಲಷ್ಕರಿ ಹತ್ಯೆಗೆ ಪ್ರತೀಕಾರವಾಗಿ ದೊಡ್ಡ ಮಟ್ಟದ ದಾಳಿ ನಡೆಸಲು ತೀರ್ಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮುನೀರ್ ಖಾನ್ ಹೇಳಿದ್ದಾರೆ.

30 ವರ್ಷ ವಯಸ್ಸಿನ ಇಸ್ಮಾಯಿಲ್ ಕಳೆದ 7 ವರ್ಷಗಳಿಂದ ಲಷ್ಕರ್ ಇ ತಯ್ಯಬಾದಲ್ಲಿ ಸಕ್ರಿಯನಾಗಿದ್ದ. ಭಾರತದ ಮೇಲೆ ದಾಳಿ ನಡೆಸಲು ತರಬೇತಿ ನೀಡಿದ್ದ 200 ಉಗ್ರರ ಕ್ಯಾಂಪಿನಲ್ಲಿ ಓರ್ವನಾಗಿದ್ದ. ಭಾರತದ ಮೇಲೆ ದಾಳಿ ಮಾಡಲು 5-6 ಜನರ ತಂಡವನ್ನು ಈತ ಕಟ್ಟಿದ್ದ ಎನ್ನಲಾಗಿದೆ.
ಸ್ಥಳೀಯ ಪ್ರದೇಶಗಳ ಅರಿವಿದ್ದ ಸ್ಥಳೀಯ ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರ ಜತೆ ಸೇರಿ ಈ ತಂಡ ದಾಳಿಗೆ ಯೋಜನೆ ರೂಪಿಸಿತ್ತು. ಮೂರು ದಿನಗಳ ನಂತರ ದಾಳಿ ನಡೆಸುವ ಯೋಜನೆ ಸಿದ್ದಪಡಿಸಿಡಲಾಗಿತ್ತು. ಹಲವರನ್ನು ಕೊಂದು ಇನ್ನೂ ಹಲವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವುದು ಉದ್ದೇಶಿತ ಯೋಜನೆಯಲ್ಲಿ ಸೇರಿತ್ತು.
ಆದರೆ ಸೋಮವಾರ ಉಗ್ರರ ಅಡಗುದಾಣಗಳ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೇ ಆತ ಏಕಾಏಕಿ ದಾಳಿ ನಡೆಸಲು ಮುಂದಾದ. ಹೀಗಾಗಿ ಬಸ್ ಮೇಲೆ ದಾಳಿ ನಡೆಸಿ ಒಂದಷ್ಟು ಯಾತ್ರಿಗಳನ್ನು ಒತ್ತೆಯಾಳುಗಳನ್ನಾಗಿಟ್ಟುಕೊಳ್ಳಲು ಇಸ್ಮಾಯಿಲ್ ನಿರ್ದೇಶನ ನೀಡಿದ್ದ.
ಆದರೆ ಉಗ್ರರಿಗೆ ಯಾತ್ರಿಗಳನ್ನು ಕೊಲ್ಲುವುದು ಮಾತ್ರ ಸಾಧ್ಯವಾಗಿತ್ತು. ಒತ್ತೆಯಾಳುಗಳಾಗಿಟ್ಟುಕೊಳ್ಳುವ ಯೋಜನೆ ವಿಫಲವಾಗಿತ್ತು.












Click it and Unblock the Notifications