ರೈತರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!
ನವದೆಹಲಿ, ಅಕ್ಟೋಬರ್ 02: ಚಳಿಗಾಲದ ಬೆಳೆಗಳಿಗೆ (ರಬಿ) 2026-27 ರ ಮಾರುಕಟ್ಟೆ ಹಂಗಾಮಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದಾಗಿ ಕಡಲೆ, ತೊಗರಿ, ಕುಸುಬೆ ಹಾಗೂ ಸಾಸಿವೆ ಬೆಳೆಯುವ ಉತ್ತರ ಕರ್ನಾಟಕ ಜಿಲ್ಲೆಗಳ ರೈತರಿಗೆ ದಸರಾ ಹಬ್ಬದ ಕೊಡುಗೆ ನೀಡಿದಂತಾಗಿದೆ.
ಉತ್ತರ ಕರ್ನಾಟಕದಲ್ಲಿ ಚಳಿಗಾಲದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಈ ಬೆಳೆಗಳಿಗೆ ಆಗಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರು ನಷ್ಟ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಕೇಂದ್ರ ಸರ್ಕಾರವು ರಬಿ ಬೆಳೆಗಳಿಗೆ ಮಾರುಕಟ್ಟೆ ಹಂಗಾಮಿನ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಈ ಮೂಲಕ ರೈತರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದಂತಾಗಿದೆ.

ಇನ್ನೂ ಈ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಟ್ವೀಟ್ ಮಾಡಿದ್ದು, ನಾಡಿನ ಅನ್ನದಾತರಿಗೆ ಇನ್ನಷ್ಟು ಶಕ್ತಿ ತುಂಬಲು ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA), 2026-27 ರ ಮಾರುಕಟ್ಟೆ ಹಂಗಾಮಿನ ಎಲ್ಲಾ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಯನ್ನು ಗಣನೀಯವಾಗಿ ಹೆಚ್ಚಿಸಲು ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಗಣನೀಯವಾಗಿ ಹೆಚ್ಚಿನ ಲಾಭ ಸಿಗುವುದು ಖಾತ್ರಿಯಾಗಲಿದೆ. ಗೋಧಿಗೆ 109%, ಸಾಸಿವೆಗೆ 93%, ಮಸೂರಕ್ಕೆ 89%, ಕಡಲೆಗೆ 59%, ಬಾರ್ಲಿಗೆ 58% ಮತ್ತು ಕುಸುಬೆಗೆ 50% ರಷ್ಟು ಲಾಭಾಂಶ ಲಭ್ಯವಾಗಲಿದೆ. ಈ ದಿಟ್ಟ ಹೆಜ್ಜೆಯು ರೈತರ ಆದಾಯವನ್ನು ದ್ವಿಗುಣಗೊಳಿಸುವ, ಬೆಳೆ ವೈವಿಧ್ಯೀಕರಣವನ್ನು ಖಚಿತಪಡಿಸುವ ಮತ್ತು ಭಾರತದ ಕೃಷಿ-ಆರ್ಥಿಕತೆಯನ್ನು ಬಲಪಡಿಸುವ ಮೋದಿ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.












Click it and Unblock the Notifications