ಕೋವಿಡ್ ಸಾವುಗಳಲ್ಲಿ ಶೇ 70ರಷ್ಟು ಪುರುಷರು: ಆರೋಗ್ಯ ಸಚಿವಾಲಯ
ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಮಹಿಳೆಯರಿಗಿಂತಲೂ ಪುರುಷರು ಹೆಚ್ಚಾಗಿ ಕೊರೊನಾ ವೈರಸ್‌ನ ಹೊಡೆತಕ್ಕೆ ತುತ್ತಾಗಿದ್ದಾರೆ. ಜನವರಿಯಿಂದ ಇದುವರೆಗೆ ದಾಖಲಾದ ಅಂದಾಜು 1.47 ಲಕ್ಷ ಕೋವಿಡ್ ಮರಣಗಳಲ್ಲಿ ಶೇ 70ರಷ್ಟು ಮಂದಿ ಪುರುಷರೇ ಇದ್ದಾರೆ.
ಬ್ರಿಟನ್‌ನಲ್ಲಿ ಶುರುವಾದ ಕೊರೊನಾ ವೈರಸ್ ರೂಪಾಂತರದ ಆರು ಪ್ರಕರಣಗಳು ಭಾರತದಲ್ಲಿಯೂ ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡುವ ವೇಳೆ ಆರೋಗ್ಯ ಸಚಿವಾಲಯ ಮಂಗಳವಾರ ಕೊರೊನಾ ವೈರಸ್ ಸಾವಿನ ಕುರಿತಾದ ವಿವರಗಳನ್ನು ಹಂಚಿಕೊಂಡಿದೆ.
ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ
ಕೋವಿಡ್ 19ನಿಂದ ಉಂಟಾದ ಸಾವುಗಳಲ್ಲಿ ಶೇ 70ರಷ್ಟು ಪ್ರಕರಣಗಳಲ್ಲಿ ಬಲಿಯಾದವರು ಪುರುಷರೇ ಆಗಿದ್ದಾರೆ. ಶೇ 45ರಷ್ಟು ಪ್ರಕರಣಗಳು 60ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದಾಖಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
'ಶೇ 66 ಒಟ್ಟಾರೆ ಪ್ರಕರಣಗಳು ಪುರುಷರದ್ದಾಗಿದೆ. ಶೇ 52 ಪ್ರಕರಣಗಳು 18-44 ವರ್ಷದ ಗುಂಪಿನವರಾಗಿದ್ದಾರೆ. ಆದರೆ ಇದರಲ್ಲಿ ಶೇ 11ರಷ್ಟು ಮಾತ್ರ ಸಾವು ವರದಿಯಾಗಿದೆ' ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿನ ದೈನಂದಿನ ಸಾವಿನ ಪ್ರಕರಣಗಳು ಜಗತ್ತಿನಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತ್ಯಂತ ಕಡಿಮೆಯಾಗಿದೆ. ಈಗ ಭಾರತದಲ್ಲಿ 300ಕ್ಕಿಂತ ಕಡಿಮೆ ಸಾವುಗಳು ವರದಿಯಾಗುತ್ತಿದ್ದು, ಆರು ವಾರಗಳ ಬಳಿಕ ಸಕ್ರಿಯ ಪ್ರಕರಣಗಳು ಶೇ 2.7ಕ್ಕೆ ಇಳಿದಿವೆ. ಸಂಚಿತ ಪಾಸಿಟಿವ್ ಪ್ರಕರಣಗಳು ಶೇ 6.02ರಷ್ಟಿವೆ.
ಕೊರೊನಾ ಲಸಿಕೆ ವಿತರಣೆಗೂ ಮುನ್ನ ಎದುರಾಗಿದೆ ಮತ್ತೊಂದು ಸಮಸ್ಯೆ
ಚಳಿ ವಾತಾವರಣದಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡಬಹುದಾಗಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಹೆಚ್ಚಿನ ಜನಸಂಖ್ಯೆ ಇರುವಲ್ಲಿ ರಾತ್ರಿ ನಿಷೇಧಾಜ್ಞೆಗಳನ್ನು ಜಾರಿಗೆ ತರಬಹುದು ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ಹೇಳಿದ್ದಾರೆ.