ಎರಡನೇ ಮದುವೆಗೆ 65 ವರ್ಷದ ಖ್ಯಾತ ವಕೀಲ ಹರೀಶ್ ಸಾಳ್ವೆ ಸಿದ್ಧತೆ
ನವದೆಹಲಿ, ಅಕ್ಟೋಬರ್ 26: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ 1 ರೂ ಶುಲ್ಕ ಪಡೆಯುವ ಮೂಲಕ ಸುದ್ದಿಯಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ಲಂಡನ್ ಮೂಲದ ಕಲಾವಿದೆಯೊಂದಿಗೆ ಎರಡನೆಯ ಮದುವೆಗೆ ಸಿದ್ಧತೆ ನಡೆಸಿದ್ದಾರೆ.
65 ವರ್ಷದ ಹರೀಶ್ ಸಾಳ್ವೆ, 38 ವರ್ಷಗಳ ವೈವಾಹಿಕ ಜೀವನದ ಬಳಿಕ ಮೀನಾಕ್ಷಿ ಸಾಳ್ವೆ ಅವರಿಂದ ಜೂನ್ ತಿಂಗಳಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದರು. ಸುಪ್ರೀಂಕೋರ್ಟ್‌ನ ಉನ್ನತ ಮಟ್ಟದ ಪ್ರಕರಣಗಳಲ್ಲಿ ಪ್ರತಿನಿಧಿಸುತ್ತಿರುವ ಸಾಳ್ವೆ, ಕೊರೊನಾ ವೈರಸ್ ಪಿಡುಗಿನ ಸಂಕಷ್ಟದ ಸಮಯದಲ್ಲಿಯೂ ಅತ್ಯಂತ ಬ್ಯುಸಿ ವಕೀಲರಲ್ಲಿ ಒಬ್ಬರಾಗಿದ್ದರು.

ಅಕ್ಟೋಬರ್ 28ರಂದು ನಡೆಯಲಿರುವ ವಿವಾಹದಲ್ಲಿ ಲಂಡನ್ ಮೂಲದ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರನ್ನು ಚರ್ಚ್‌ನಲ್ಲಿ ವರಿಸಲಿದ್ದಾರೆ. ಸಾಳ್ವೆ ಅವರು ಉತ್ತರ ಲಂಡನ್‌ನಲ್ಲಿ ನೆಲೆಸಿದ್ದು, ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ.
ಬ್ರಿಟನ್‌ನಲ್ಲಿ ಜನಿಸಿ ಕ್ಯಾರೋಲಿನ್ ಅವರಿಗೆ 18 ವರ್ಷದ ಮಗಳಿದ್ದಾಳೆ. ಕಲೆಯ ಜತೆಗೆ ತಮ್ಮಿಬ್ಬರಿಗೂ ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಒಂದೇ ರೀತಿಯ ಅಭಿರುಚಿ ಇದೆ ಎಂದು ಸಾಳ್ವೆ ತಿಳಿಸಿದ್ದಾರೆ. ಲಂಡನ್‌ನಲ್ಲಿ 15 ಜನರು ಮಾತ್ರವೇ ಸೇರಲು ಅವಕಾಶ ಇರುವುದರಿಂದ ಈ ಮದುವೆ ಅತ್ಯಂತ ಸರಳವಾಗಿ ನಡೆಯಲಿದೆ. ಕ್ಯಾರೋಲಿನ್ ಅವರ ಕುಟುಂಬ ಹಾಗೂ ಬ್ರಿಟನ್‌ನಲ್ಲಿನ ಖ್ಯಾತ ಹೋಟೆಲ್ ಉದ್ಯಮಿಗಳಾದ ಕ್ಯಾಮೆಲ್ಲಿಯಾ ಮತ್ತು ನಮಿತಾ ಪಂಜಾಬಿ ಸಾಳ್ವೆ ಅವರ ಅತಿಥಿಗಳಾಗಿ ಮದುವೆಯಲ್ಲಿ ಭಾಗವಹಿಸಲಿದ್ದಾರೆ.
ಕುಲಭೂಷಣ್ ಜಾಧವ್, ವೊಡಾಫೋನ್, ರತನ್ ಟಾಟಾ, ಮುಕೇಶ್ ಅಂಬಾನಿ, ಐಟಿಸಿ ಹೋಟೆಲ್ ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳಲ್ಲಿ ಹರೀಶ್ ಸಾಳ್ವೆ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಕಂಪೆನಿಗಳ ಪರ ವಾದ ಮಂಡಿಸಿದ್ದಾರೆ.












Click it and Unblock the Notifications