ಛತ್ತೀಸ್‌ಗಢ: 51 ಮಕ್ಕಳು ಸೇರಿ ನೂರು ಮಂದಿ ಏಕಾಏಕಿ ಆಸ್ಪತ್ರೆಗೆ ದಾಖಲು
ಭೋಪಾಲ್, ಅಕ್ಟೋಬರ್ 07: ಛತ್ತೀಸ್‌ಗಢದ ಅನ್ಸುಲಾ ಗ್ರಾಮದಲ್ಲಿ ಬುಧವಾರ 51 ಮಕ್ಕಳು ಸೇರಿ ನೂರು ಮಂದಿ ದಿಡೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ವಿಷಾಹಾರ ಸೇವನೆಯ ಶಂಕೆ ಉಂಟಾಗಿದೆ.
ಸ್ಥಳೀಯ ಶಾಲೆಯೊಂದರ ಮುಖ್ಯ ಪ್ರಾಧ್ಯಾಪಕರ ನಿವಾಸದಲ್ಲಿದ್ದ ಕಾರ್ಯಕ್ರಮವೊಂದಲ್ಲಿ ಈ ಜನರು ಭಾಗಿಯಾಗಿದ್ದರು. ಅಲ್ಲಿ ಸೇವನೆ ಮಾಡಿದ ಆಹಾರದಿಂದ ಈ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಅನುಮಾನ ವ್ಯಕ್ತವಾಗಿದೆ.
ಭೇದಿ ಹಾಗೂ ವಾಂತಿ ಅತಿಯಾಗಿ ಸುಮಾರು ನೂರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇನ್ನು ಆರೋಗ್ಯ ಕೇಂದ್ರದಲ್ಲಿಯೂ ಹಲವಾರು ಜನರು ದಾಖಲಾಗಿದ್ದಾರೆ ಎಂದು ಹೇಳಲಾಗಿದ್ದು ಅತಿಯಾದ ನಿಶಕ್ತಿ ಉಂಟಾದವರಿಗೆ ಡ್ರಿಪ್ಸ್ ಅನ್ನು ಹಾಕಲಾಗಿದೆ.

ಪಿತೋರಿಯಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಲೆಕ್ಟರ್ ದೋಮನ್ ಸಿಂಗ್ ಭೇಟಿ ನೀಡಿದ್ದು, ರೋಗಿಗಳನ್ನು ಮಾತನಾಡಿಸಿದ್ದಾರೆ. ರೋಗಿಗಳ ಆರೋಗ್ಯವು ಸದ್ಯಕ್ಕೆ ಸುಧಾರಿಸಿದೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಎನ್‌ಡಿ ಟಿವಿಗೆ ಪ್ರತಿಕ್ರಿಯೆ ನೀಡಿರುವ ಕಲೆಕ್ಟರ್ ದೋಮನ್ ಸಿಂಗ್, "ನಾವು ಆಸ್ಪತ್ರೆಗೆ ತೆರಳಿ ಎಲ್ಲಾ ವಾರ್ಡ್‌ನಲ್ಲಿ ದಾಖಲಾಗಿರುವ ರೋಗಿಗಳ ಪರಿಶೀಲನೆ ನಡೆಸಿದೆವು. ಸಾಂಕ್ರಾ ಆರೋಗ್ಯ ಕೇಂದ್ರಕ್ಕೆ ದಾಖಲಾದ ರೋಗಿಗಳ ಪೈಕಿ ಹಲವಾರು ಮಂದಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರನ್ನು ಆಸ್ಪತ್ರೆಯಿಂದ ಬಿಡುಗಡೆಯೂ ಮಾಡಲಾಗಿದೆ. ಯಾವ ಕಾರಣದಿಂದಾಗಿ ಗ್ರಾಮದ ಹಲವರಿಗೆ ಈ ರೀತಿ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂಬುವುದನ್ನು ಪರಿಶೀಲನೆ ನಡೆಸಲಾಗುವುದು," ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಸಮಗ್ರವಾದ ತನಿಖೆ ನಡೆಸುವಂತೆ ಹಾಗೂ ವರದಿಯನ್ನು ಶೀಘ್ರದಲ್ಲೇ ನೀಡುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಕಲೆಕ್ಟರ್ ಸೂಚನೆ ನೀಡಿದ್ದಾರೆ.
ಇನ್ನು ಈ ಹಿಂದೆ ಛತ್ತೀಸ್‌ಗಢದ ರಾಯಪುರದಲ್ಲಿ ಈ ರೀತಿಯ ಘಟನೆಯು ಜುಲೈ ತಿಂಗಳಿನಲ್ಲಿ ವರದಿ ಆಗಿತ್ತು. ರಾಯಪುರ ಜಿಲ್ಲೆಯ ತಿಲ್ದಾ ಸಗುಣ ಗ್ರಾಮದಲ್ಲಿ ಸುಮಾರು 208 ಜನರು ವಿಷಾಪೂರಿತ ಆಹಾರ ಸೇವನೆ ಮಾಡಿ ಏಕಾಏಕಿ ತೀವ್ರ ಅಸ್ವಸ್ತರಾಗಿದ್ದರು. ಇಷ್ಟು ದೊಡ್ಡ ಸಂಖ್ಯೆಯ ಜನರು ಅನಾರೋಗ್ಯಕ್ಕೆ ತುತ್ತಾದ ಕಾರಣ ಗ್ರಾಮದಲ್ಲಿ ಭಾರೀ ಸಂಚಲನ ಉಂಟಾಗಿತ್ತು.
ಈ ಪೈಕಿ 62 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಇಲಾಖೆ ತಂಡವು ಗ್ರಾಮದಲ್ಲಿ ವೈದ್ಯಕೀಯ ಶಿಬಿರವನ್ನು ಆಯೋಜಿಸಿತ್ತು. ಜಿಲ್ಲಾಧಿಕಾರಿ ಸೌರಭ್ ಕುಮಾರ್ ಸಂತ್ರಸ್ತರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದರು. ಎಲ್ಲಾ ರೋಗಿಗಳು ಚೇತರಿಸಿಕೊಂಡಿದ್ದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications