ಉತ್ತರಾಖಂಡ; ಭಾರಿ ಹಿಮಪಾತದಲ್ಲಿ ಸಿಲುಕಿದ 41 ಕಾರ್ಮಿಕರು
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮಪಾತವಾಗಿದ್ದು ಕನಿಷ್ಠ 41 ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕಾರ್ಮಿಕರು ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಪ್ರಸಿದ್ಧ ಬದ್ರಿನಾಥ ದೇವಸ್ಥಾನದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ಗಡಿ ಪ್ರದೇಶದ ಗ್ರಾಮ ಮಾನಾದ ಬಳಿ ಈ ದುರ್ಘಟನೆ ನಡೆದಿದೆ.
ಹಿಮಪಾತದಲ್ಲಿ ಸುಮಾರು 57 ಮಂದಿ ಸಿಲುಕಿದ್ದು ಈಗಾಗಲೇ 16 ಜನರನ್ನು ರಕ್ಷಣೆ ಮಾಡಿ ಮಾನಾ ಸಮೀಪವಿರುವ ಸೇನಾ ಶಿಬಿರಕ್ಕೆ ಕಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಈಗಾಗಲೇ ಸ್ಥಳಕ್ಕೆ ನಾಲ್ಕು ಆಂಬುಲೆನ್ಸ್‌ಗಳನ್ನು ಕಳಿಸಲಾಗಿದ್ದು, ಭಾರಿ ಹಿಮಪಾತವಾಗುತ್ತಿರುವ ಕಾರಣ ಸಂಚಾರ ಕೂಡ ವಿಳಂಬವಾಗಿದೆ ಎಂದು ಬಿಆರ್‌ಒ (ಗಡಿ ರಸ್ತೆಗಳ ಸಂಸ್ಥೆ) ಕಾರ್ಯನಿರ್ವಾಹಕ ಎಂಜಿನಿಯರ್ ಸಿಆರ್ ಮೀನಾ ಎಎನ್‌ಐಗೆ ತಿಳಿಸಿದ್ದಾರೆ.

ಈ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವ ಜೊತೆಗೆ ಹಿಮಪಾತವಾಗುತ್ತಿದ್ದು, ಹೆಲಿಕಾಪ್ಟರ್ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ, ರಸ್ತೆ ಸಂಚಾರ ಕೂಡ ಕಷ್ಟವಾಗಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಮಾಹಿತಿ ನೀಡಿದ್ದಾರೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡವು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಲು ಈಗಾಗಲೇ ಜೋಶಿಮಠದಿಂದ ಹೊರಟಿದ್ದು ಕೆಲವೇ ಕ್ಷಣದಲ್ಲಿ ಸ್ಥಳವನ್ನು ತಲುಪಲಿದೆ. ಲಂಬಾಗಡ್ ಪ್ರದೇಶದಲ್ಲಿ ರಸ್ತೆ ಮೇಲೆ ಹಿಮಪಾತವಾಗಿದ್ದು ರಸ್ತೆ ಸಂಚಾರ ಕಷ್ಟವಾಗಿರುವ ಕಾರಣ, ಮಾರ್ಗ ತೆರವು ಮಾಡಲು ಈಗಾಗಲೇ ಸೈನ್ಯಕ್ಕೆ ಮನವಿ ಮಾಡಲಾಗಿದೆ. ಸಹಸ್ತ್ರಧಾರ ಹೆಲಿಪ್ಯಾಡ್‌ನಲ್ಲಿ ಮತ್ತೊಂದು ತಂಡ ಸಜ್ಜಾಗಿದ್ದು. ಹವಾಮಾನ ಪರಿಸ್ಥಿತಿ ಸುಧಾರಿಸಿದ ತಕ್ಷಣ, ಎಸ್‌ಡಿಆರ್‌ಎಫ್‌ನ ಎತ್ತರದ ರಕ್ಷಣಾ ತಂಡವನ್ನು ಹತ್ತಿರದ ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಇಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಎಸ್‌ಡಿಆರ್‌ಎಫ್ ಡ್ರೋನ್ ತಂಡವೂ ಸಜ್ಜಾಗಿದೆ. ಆದರೆ, ಭಾರೀ ಹಿಮಪಾತವಾಗುತ್ತಿರುವುದರಿಂದ ಡ್ರೋನ್ ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದು ಎಸ್‌ಡಿಆರ್‌ಎಫ್‌ನ ಪೊಲೀಸ್ ಮಹಾನಿರ್ದೇಶಕ ರಿಧಿಮ್ ಅಗರ್ವಾಲ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದು, ಘಟನೆಯು ನೋವು ತಂದಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಎಲ್ಲಾ ಕಾರ್ಮಿಕ ಸಹೋದರರು ಸುರಕ್ಷಿತವಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications