ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ನ್ಯಾಯಾಲಯಕ್ಕೆ ರಕ್ಕಮ್ಮ ಹಾಜರ್
ದೆಹಲಿ ಡಿಸೆಂಬರ್ 12: 'ವಿಕ್ರಾಂತ್‌ರೋಣ' ಸಿನಿಮಾದ ಹಾಡು 'ರಾ ರಾ.. ರಕ್ಕಮ್ಮ..' ಹಾಡಿಗೆ ಎಲ್ಲರ ಮನೆ ಮಾತಾಗಿದ್ದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರ ಸಹವಾಸ ಮಾಡಿದ್ದೇ ಕಂಠಕವಾಗಿ ಹೋಗಿದೆ. ಇಂದು ದೆಹಲಿ ನ್ಯಾಯಾಲಯಕ್ಕೆ ರಕ್ಕಮ್ಮ ಹಾಜರಾಗಿದ್ದಾಳೆ.
ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೋಮವಾರ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಜಾಕ್ವೆಲಿನ್ ತನ್ನ ವಕೀಲರಾದ ಪ್ರಶಾಂತ್ ಪಾಟೀಲ್ ಮತ್ತು ಶಕ್ತಿ ಪಾಂಡೆ ಅವರೊಂದಿಗೆ ಬೆಳಿಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಪ್ರಕರಣದ ವಾದಗಳು ಪ್ರಾರಂಭವಾಗಿವೆ.

ಇಂದು ನ್ಯಾಯಾಲಯದ ಮುಂದೆ ರಕ್ಕಮ್ಮ ಹಾಜರ್
200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಸದ್ಯ ಜೈಲಿನಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಆಪ್ತೆ ಎಂದು ಗುರುತಿಸಿಕೊಂಡ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿದ್ದಾರೆಂದು ಇಡಿ ಆರೋಪ ಮಾಡಿತ್ತು. ಇದರಿಂದ ಆಕೆಯ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಜಾಕ್ವೆಲಿನ್ ವಿಚಾರಣೆಗೊಳಗಾಗುತ್ತಿದ್ದಂತೆ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಇರುವ ಫೋಟೋಗಳು ವೈರಲ್ ಆಗತೊಡಗಿದ್ದವು. ಇದರಿಂದ ಪ್ರಕರಣ ಮತ್ತಷ್ಟು ಚುರುಕು ಪಡೆದುಕೊಂಡಿತ್ತು. ಸದ್ಯ ರಕ್ಕಮ್ಮನಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ಅಗತ್ಯಬಿದ್ದಲ್ಲಿ ಜಾಕ್ವೆಲಿನ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಇದರ ಬೆನ್ನಲ್ಲೆ ಇಂದು ಜಾಕ್ವೆಲಿನ್ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗಿದ್ದಾರೆ.

200 ಕೋಟಿ ಸುಲಿಗೆ ಮಾಡಿದ್ದು ಹೇಗೆ?
ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದ ವಂಚಕ. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ 200 ಕೋಟಿ ರೂಪಾಯಿಯನ್ನು ವಸೂಲಿ ಮಾಡಿದ್ದನು. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿ ಆದಿತಿಗೆ ಪೋನ್ ಕಾಲ್ ಗಳನ್ನು ಮಾಡಿ ತನ್ನನ್ನು ತಾನು ಕೇಂದ್ರ ಗೃಹ ಇಲಾಖೆಯ ಅಧಿಕಾರಿ, ಕಾನೂನು ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪತಿಯನ್ನು ಜೈಲಿನಲ್ಲಿ ಬಿಡುಗಡೆ ಮಾಡಿಸಲು ಹಣ ನೀಡಬೇಕೆಂದು ಹೇಳಿದ್ದ.
ವಾಯ್ಸ್ ಮಾಡ್ಯುಲೇಷನ್ ಸಾಫ್ಟ್‌ವೇರ್ ಮತ್ತು ಸ್ಪೂಫಿಂಗ್ ಕರೆಗಳನ್ನು ಬಳಸಿ ಸುಕೇಶ್ ಚಂದ್ರಶೇಖರ್ 200 ಕೋಟಿ ರೂ. ವಂಚನೆ ಮಾಡಿದ್ದನು. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಯಿತು. ಆಗ ಪ್ರಕರಣ ಬೆಳಕಿಗೆ ಬಂದಿದೆ. ವಂಚಕ ಸುಕೇಶ್ ಈ 200 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣವನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ. ಇದರಿಂದ ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ವಿಚಾರಣೆ ನಡೆಸಿದೆ.

ಸುಕೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಫೋಟೋ
ವಂಚನೆ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಸುಕೆಶ್ ವಿಚಾರಣೆ ವೇಳೆ ಜಾಕ್ವೆಲಿನ್ ಹೆಸರನ್ನು ಸುಕೆಶ್ ಬಹಿರಂಗಪಡಿಸಿದ್ದಾರೆ. ಆದರೆ ತಮಗೂ ಸುಕೇಶ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡರೂ ಸುಕೇಶ್ ಅವರೊಂದಿಗಿನ ಅವರ ಅನ್ಯೋನ್ಯವಾದ ಫೋಟೋಗಳು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್ ಮುತ್ತು ಕೊಡುತ್ತಿರುವ ಪೋಟೋಗಳು ಲೀಕ್ ಆಗಿವೆ. ಸುಕೇಶ್ ಚಂದ್ರಶೇಖರ್ ಅವರು ಕೂಡ ಜಾಕ್ವೆಲಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ವಿಚಾರಣೆಗೊಳಪಟ್ಟ ನಟಿಯರು
ಜಾಕ್ವೆಲಿನ್ ಫರ್ನಾಂಡೀಸ್‌ಗೆ ಲಕ್ಸುರಿ ಬಿಎಂಡಬ್ಲ್ಯು ಕಾರ್ ಅನ್ನು ಗಿಫ್ಟ್ ಆಗಿ ಸುಕೇಶ್ ಚಂದ್ರಶೇಖರ್ ನೀಡಿದ್ದ. ಡೈಮೆಂಡ್ ಬ್ರಾಸಲೆಟ್, ಫ್ರಾಂಕ್ ಮುಲ್ಲರ್ ಲಕ್ಸುರಿ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್‌ಬ್ಯಾಗ್‌ಗಳನ್ನು ಗಿಫ್ಟ್ಗಳನ್ನು ನೀಡಿದ್ದರು. ಜೊತೆಗೆ ಕುದುರೆಯೊಂದನ್ನು ಗಿಫ್ಟ್ ಆಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಖೇಶ್ ಚಂದ್ರಶೇಖರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುಕೇಶ್ ಚಂದ್ರಶೇಖರ್ ಕೇವಲ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಮಾತ್ರವಲ್ಲದೇ, ಸಾರಾ ಅಲಿಖಾನ್, ಜಾಹ್ನವಿ ಕಪೂರ್ ಗೂ ಗಿಫ್ಟ್ ಗಳನ್ನು ನೀಡಿದ್ದಾನೆ. ಇದೀಗ ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಶಾಮೀಲಾಗಿರುವ ಕಾರಣ ಇಡಿ ಬಾಲಿವುಡ್ ನಟಿಯನ್ನು ಆರೋಪಿಯನ್ನಾಗಿಸಿದೆ.












Click it and Unblock the Notifications