ಸುಡಾನ್‌ನಿಂದ ಭಾರತಕ್ಕೆ ಬಂದ 186 ಭಾರತೀಯ ಪ್ರಜೆಗಳು
ನವದೆಹಲಿ: ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನ ಸುಡಾನ್ ನೆಲದಿಂದ ರಕ್ಷಿಸಿ ಕರೆತರುವ ಕಾರ್ಯ ಮುಂದುವರಿದ ಬೆನ್ನಲ್ಲೇ, ಮತ್ತೊಂದು ಬ್ಯಾಚ್‌ನಲ್ಲಿ 186 ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ. ಭಾರತೀಯ ಸೇನಾ ವಿಮಾನದಲ್ಲಿ 186 ಜನರನ್ನ ಸ್ವದೇಶಕ್ಕೆ ತಲುಪಿಸಲಾಗಿದೆ. ಮತ್ತೊಂದೆಡೆ ಸುಡಾನ್ ಸೇನೆ ಮಹತ್ವದ ಘೋಷಣೆ ಹೊರಡಿಸಿದ್ದು, ಸಂಚಲನ ಸೃಷ್ಟಿಯಾಗಿದೆ.
ಸುಡಾನ್‌ನಿಂದ ವಿವಿಧ ದೇಶಗಳ ಪ್ರಜೆಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿ ಇರುವಾಗಲೇ, ಮತ್ತೊಂದ್ಕಡೆ ರಕ್ಷಣಾ ಕಾರ್ಯಕ್ಕೆ ಸಹಾಯ ಆಗಲಿ ಎಂದು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೊದಲು 72 ಗಂಟೆ ಕಾಲ ಕದನ ವಿರಾಮ ಘೋಷಿಸಲಾಗಿತ್ತು, ಈಗ ಮತ್ತೆ ಇನ್ನೂ 72 ಗಂಟೆ ಕಾಲ ಕದನ ವಿರಾಮ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಸುಡಾನ್ ಜನ ಇನ್ನೂ 3 ದಿನ ನೆಮ್ಮದಿ ನಿಟ್ಟುಸಿರು ಬಿಡಬಹುದಾಗಿದೆ. ಆದರೆ ಅದಕ್ಕೂ ಕಲ್ಲು ಹಾಕುತ್ತಿದೆಯಂತೆ ಸುಡಾನ್ ಅರೆಸೇನಾ ಪಡೆ.

ಕದನ ವಿರಾಮ ಇದ್ದರೂ ಗುಂಡಿನ ಸದ್ದು!
ಹೌದು, ಸುಡಾನ್ ನೆಲದಲ್ಲಿ ಖುದ್ದು ಸೇನೆ ಮತ್ತು ಅರೆಸೇನಾ ಪಡೆಗಳು ಕದನ ವಿರಾಮ ಘೋಷಿಸಿದ್ದರೂ ಗುಂಡಿನ ಮೊರೆತ ನಿಂತಿಲ್ಲ. ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದೆ. ಹೀಗಾಗಿ ವಿವಿಧ ದೇಶಗಳ ನಾಗರಿಕರನ್ನ ರಕ್ಷಿಸುವ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಮಾತು ಕೊಟ್ಟಂತೆ ಸುಡಾನ್‌ನ ಎರಡೂ ಪಡೆಗಳು ನಡೆದುಕೊಂಡಿಲ್ಲ. ಅದರಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಲು ಸುಡಾನ್ ಅರೆಸೇನಾ ಪಡೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ತಪ್ಪನ್ನು ಸೇನೆ ಮೇಲೆ ಹಾಕುತ್ತಿದೆ ಸುಡಾನ್ ಅರೆಸೇನಾ ಪಡೆ.
ಹಿಂಸೆ ಶುರುವಾಗಿದ್ದು ಯಾವಾಗ?
ಏಪ್ರಿಲ್ 15ರಂದು ಸುಡಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಬಳಿಕ ನೂರಾರು ಜನರು ಬಲಿಯಾದರು. ಇಂತಹ ಪರಿಸ್ಥಿತಿ ನಡುವೆ ಭಾರತೀಯರು ತಾಯ್ನಾಡಿಗೆ ಬರಲು ಪರದಾಡುತ್ತಿದ್ದರು. ತಕ್ಷಣ ಅಲರ್ಟ್ ಆದ ಕೇಂದ್ರ ಸರ್ಕಾರ, ಸೇನೆಯನ್ನ ಸಜ್ಜುಗೊಳಿಸಿ, ಭಾರತೀಯರ ರಕ್ಷಣೆಗೆ 'ಆಪರೇಷನ್ ಕಾವೇರಿ' ಆರಂಭಿಸಿತ್ತು. ಈ ಮೂಲಕ ಸಾವಿರಾರು ಭಾರತೀಯರನ್ನ ಸಂಪರ್ಕಿಸಿ, ಸೂಕ್ತ ಜಾಗಕ್ಕೆ ಕರೆತಂದು ಸೌದಿ ಅರೇಬಿಯಾ ಮೂಲಕ ರಕ್ಷಿಸಿ ತಾಯ್ನಾಡಿಗೆ ಮರಳಿ ಕರೆತರಲಾಗಿದೆ.

ಸೌದಿ ಮೂಲಕ ರಕ್ಷಣಾ ಕಾರ್ಯ
ಭಾರತದ ರಕ್ಷಣಾ ಕಾರ್ಯಕ್ಕೆ ನಮ್ಮ ದೇಶದ ಮಿತ್ರ ಸೌದಿ ಅರೇಬಿಯಾ ನೆರವಾಗುತ್ತಿದೆ. ಹೇಗೆಂದರೆ ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿದೆ. ಹೀಗಾಗಿ ಸೌದಿ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. ಇದೀಗ ಸೇನಾ ವಿಮಾನದಲ್ಲಿ 186 ಜನರನ್ನ ಸ್ವದೇಶಕ್ಕೆ ತಲುಪಿಸಲಾಗಿದೆ. ಸುರಕ್ಷಿತವಾಗಿ ಸುಡಾನ್ ನೆಲದಿಂದ ಭಾರತಕ್ಕೆ ಮರಳಿದ ಪ್ರಜೆಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಕನ್ನಡಿಗರ ಜೀವನದಿ ಹೆಸರು!
ಹೌದು, ಕನ್ನಡಿಗರ ಜೀವನದಿ ಹೆಸರನ್ನು ಸುಡಾನ್ ಕಾರ್ಯಾಚರಣೆ ಇಡಲಾಗಿದೆ. 'ಆಪರೇಷನ್ ಕಾವೇರಿ' ಹೆಸರಲ್ಲಿ ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಸುಡಾನ್ ನೆಲದಲ್ಲಿ ಪರದಾಡಿದ್ದ ಹಕ್ಕಿಪಿಕ್ಕಿ ಜನರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಬಹುತೇಕ ವಿದೇಶಿಗರು ಸುಡಾನ್ ನೆಲದಿಂದ ಹೊರಟಿದ್ದಾರೆ. ಆದರೆ ಸುಡಾನ್ ಹಿಂಸಾಚಾರಕ್ಕೆ ರಕ್ತದಾಹ ಮಾತ್ರ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಕದನ ವಿರಾಮ ಇದ್ದರೂ ಗುಂಡು, ಬಾಂಬ್ ಎಸೆಯುತ್ತಾ ಹಿಂಸೆಗೆ ಇಳಿದಿದ್ದಾರೆ ಎರಡೂ ಪಡೆಗಳ ಸೈನಿಕರು.
ಒಟ್ನಲ್ಲಿ ಸುಡಾನ್ ನೆಲದಲ್ಲಿ ಸದ್ಯಕ್ಕೆ ಶಾಂತಿ ನೆಲೆಸುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಈ ನಡುವೆ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, 75 ಸಾವಿರ ಜನ ಸುಡಾನ್ ರಾಜಧಾನಿ ಖಾರ್ಟೂಮ್ ತೊರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಭೀಕರ ಸಮಸ್ಯೆ ಎದುರಾಗಬಹುದು. ಸುಡಾನ್ ಅಕ್ಕಪಕ್ಕದ ದೇಶಗಳು ಕೂಡ ಹಿಂಸಾಚಾರ ಕಂಡು ಬೆಚ್ಚಿಬಿದ್ದಿವೆ. ಸುಡಾನ್ ಸಂಘರ್ಷ ಅಕ್ಕಪಕ್ಕದ ದೇಶಗಳಿಗೂ ಹಬ್ಬಿದರೆ ಆಫ್ರಿಕಾದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.












Click it and Unblock the Notifications