ಕಳೆದ 24 ಗಂಟೆಗಳಲ್ಲಿ 19,557 ಮಂದಿ ಸೋಂಕಿತರು ಚೇತರಿಕೆ
ಬೆಂಗಳೂರು, ಜನವರಿ 4: ಕೊರೊನಾ ವೈರಸ್‌ನ ರೂಪಾಂತರಿ ತಳಿಯ ಪ್ರಕರಣಗಳು ಭಾರತದಲ್ಲಿ ಪತ್ತೆಯಾದ ಆತಂಕದ ನಡುವೆಯೂ ದೇಶದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರ ಇಳಿಕೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,505 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಭಾನುವಾರದಿಂದ 214 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಪ್ರಕರಣದಲ್ಲಿಯೂ ಗಣನೀಯ ಇಳಿಕೆ ಸಾಧ್ಯವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 19,557 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಸೋಮವಾರದ ವರದಿ ವೇಳೆಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳು 2,43,953ಕ್ಕೆ ತಗ್ಗಿವೆ.
ಕೊರೊನಾ ಲಸಿಕೆಯಿಂದ ನಪುಂಸಕತೆ ಬರುತ್ತದೆ ಎಂದ ಮುಖಂಡ: ಬಿಜೆಪಿ ತಿರುಗೇಟು
ಇದುವರೆಗೂ 1,03,40,470 ಒಟ್ಟು ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 99,46,867 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1,49,649 ಜನರು ಸಾವಿಗೀಡಾಗಿದ್ದಾರೆ.
ದೇಶದಲ್ಲಿ ಜ. 3ರ ವರೆಗೂ 17,56,35,761 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಭಾನುವಾರ ಒಂದೇ ದಿನ 7,35,978 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ದೇಶದ ಕೋವಿಡ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ: ಡಿಸಿಜಿಐ
ಜಗತ್ತಿನಾದ್ಯಂತ ಇದುವರೆಗೂ 85,505,217 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 1,850,703 ಜನರು ಮೃತಪಟ್ಟಿದ್ದಾರೆ. 60,455,521 ಮಂದಿ ಚೇತರಿಸಿಕೊಂಡಿದ್ದಾರೆ. 23,198,993 ಸಕ್ರಿಯ ಪ್ರಕರಣಗಳಿವೆ.