ಹೈದರಾಬಾದ್: ಶಾಸಕರ ಮನೆ ಎದುರೇ ರೈತರ ಆತ್ಮಹತ್ಯೆ ಯತ್ನ
ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ಶಾಸಕರ ಮನೆ ಮುಂದೆಯೇ ರೈತರ ಆತ್ಮಹತ್ಯೆಗೆ ಯತ್ನ. ಲಂಚದ ಬಾಧೆಯಿಂದ ನರಳಿದ್ದ ಕರೀಂ ನಗರದ ಶ್ರೀನಿವಾಸ್ ಹಾಗೂ ಪರಶುರಾಮುಲು ಎಂಬ ರೈತರಿಂದ ಈ ಯತ್ನ.
ಕರೀಂ ನಗರ (ತೆಲಂಗಾಣ), ಸೆಪ್ಟಂಬರ್ 4: ಲಂಚಾವತಾರದ ಕಬಂಧಬಾಹುವಿನಲ್ಲಿ ಸಿಲುಕಿದ ಇಬ್ಬರು ಯುವಕರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮನಮಿಡಿಯುವ ಘಟನೆ ಹೈದರಾಬಾದ್ ನಲ್ಲಿ ಸೋಮವಾರ ನಡೆದಿದೆ.
ಇವರ ಹೆಸರು ಎಂ. ಶ್ರೀನಿವಾಸ್ (25) ಹಾಗೂ ವೈ. ಪರಶುರಾಮುಲು (23). ಈ ಇಬ್ಬರೂ ಹೈದರಾಬಾದ್ ನಿಂದ ಸುಮಾರು 160 ಕಿ.ಮೀ. ದೂರದ ಕರೀಂ ನಗರದವರು. ದಲಿತ ಸಮುದಾಯಕ್ಕೆ ಸೇರಿದ ಇವರು ವೃತ್ತಿಯಿಂದ ರೈತರಾಗಿದ್ದು, ತಮ್ಮ ಸಮುದಾಯಕ್ಕೆ ನೀಡಬೇಕಿರುವ ಕೆಲ ಸವಲತ್ತುಗಳನ್ನು ಪಡೆಯಲು ಹಲವಾರು ದಿನಗಳಿಂದಲೂ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದರು. ಆದರೆ, ಇವರಿಗೆ ಈ ಸೌಲಭ್ಯಗಳನ್ನು ನೀಡಬೇಕಿದ್ದ ಗ್ರಾಮೀಣ ಕಂದಾಯ ಅಧಿಕಾರಿಯೊಬ್ಬರು ಇಬ್ಬರಿಂದ ತಲಾ 20 ಸಾವಿರ ರು. ಲಂಚ ಕೇಳಿದ್ದರು.

ಇದರಿಂದ ಕಂಗಾಲಾದ ರೈತರು, ಆ ಅಧಿಕಾರಿಯನ್ನು ತಮಗೆ ಸಿಗಬೇಕಾದ ಸವಲತ್ತುಗಳನ್ನು ನೀಡುವಂತೆ ಬೇಕಾದಷ್ಟು ಬಾರಿ ಮನವಿ ಮಾಡಿದ್ದರು. ಇದಕ್ಕೆ ಅಧಿಕಾರಿಯು ಒಪ್ಪದಿದ್ದಾಗ, ಆ ಪ್ರಾಂತ್ಯದ ಶಾಸಕರಾದ ಆಡಳಿತ ಪಕ್ಷ ಟಿಆರ್ ಎಸ್ ನ ರಸಮಯಿ ಬಾಲಕೃಷ್ಣನ್ ಅವರ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಒತ್ತಾಯಿಸಲು ಅವರು ಪ್ರಯತ್ನಿಸಿದ್ದಾರೆ.
ಆದರೆ, ಭಾನುವಾರ ಬೆಳಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 3:30ರವರೆಗೆ ಕಾಯ್ದರೂ ಶಾಸಕರು ಮನೆಯಲ್ಲಿದ್ದರೂ ಇವರನ್ನು ಭೇಟಿ ಮಾಡಲಿಲ್ಲ. ಸುಮಾರು ಐದಾರು ತಾಸುಗಳ ಕಾಯುವಿಕೆಯ ನಂತರ, ಶಾಸಕರ ಅನುಯಾಯಿಗಳು ಇವರ ಬಳಿ ಬಂದು ಶಾಸಕರು ಯುವಕರನ್ನು ಭೇಟಿ ಮಾಡುವುದಿಲ್ಲವೆಂದು ತಿಳಿಸಿದರು. ಅಲ್ಲದೆ, ಶೀಘ್ರವೇ ನಿವಾಸದಿಂದ ಹೊರನಡೆಯುವಂತೆ ಆಜ್ಞಾಪಿದರು.
ಆಗ, ಶಾಸಕರ ಬೆಂಬಲಿಗರು ಹಾಗೂ ಯುವಕರ ನಡುವೆ ಕೊಂಚ ಮಾತಿನ ಚಕಮಕಿ ನಡೆಯಿತು. ಎಷ್ಟು ಬೇಡಿದರೂ, ತಮ್ಮ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲವೆಂದು ಹತಾಶೆಗೊಂಡ ಆ ಇಬ್ಬರೂ ಯುವಕರು ಪೇಟಿಗೆ ಹೋಗಿ ಸೀಮೆಎಣ್ಣೆ ತಂದು ಶಾಸಕರ ಮನೆಯ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಆಗ, ಸುತ್ತಲಿನ ಜನರು ಓಡಿಬಂದು ಇವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿರುವ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ಗ್ರಾಮೀಣ ಕಂದಾಯ ಅಧಿಕಾರಿಯ ತಪ್ಪು ಕಂಡರೆ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.












Click it and Unblock the Notifications