ಬೆಂಗಳೂರಿನ ಸಿಬಿಐನಿಂದ ಡೆಕ್ಕನ್ ಕ್ರಾನಿಕಲ್ ರೆಡ್ಡಿ ಬಂಧನ
ಹೈದರಾಬಾದ್, ಫೆ.15: ವಂಚನೆ ಆರೋಪದ ಮೇಲೆ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿ(ಡಿಸಿಎಚ್ಎಲ್) ಸಂಸ್ಥೆ ಮುಖ್ಯಸ್ಥ ಟಿ ವೆಂಕಟರಾಮ ರೆಡ್ಡಿ ಅವರನ್ನು ಸಿಬಿಐ ತಂಡ ಶನಿವಾರ ರಾತ್ರಿ ಬಂಧಿಸಿದೆ. ಸಿಬಿಐ ತಂಡ ಬಂಧಿತ ರೆಡ್ಡಿ ಅವರನ್ನು ಭಾನುವಾರ ಬೆಂಗಳೂರಿಗೆ ಕರೆ ತರುವ ಸಾಧ್ಯತೆಯಿದೆ.
ಬೆಂಗಳೂರಿನ ಸಿಬಿಐ ತಂಡ(ಬ್ಯಾಂಕಿಂಗ್ ಸಾಲ ಹಾಗೂ ವಂಚನೆ ಅಪರಾಧ ತಡೆ ಘಟಕ) ಅವರನ್ನು ಬಂಧಿಸಲು ಶನಿವಾರ ಬೆಳಗ್ಗೆ ಹೈದರಾಬಾದಿಗೆ ತೆರಳಿತ್ತು, ಅದರೆ, ರಾತ್ರಿ ವೇಳೆಗೆ ವೆಂಕಟರಾಮ ರೆಡ್ಡಿ ಹಾಗೂ ಸಂಸ್ಥೆಯ ಎಂಡಿ ವಿನಾಯಕ್ ರಾಮ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ನಂತರ ಇಬ್ಬರನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮ್ಯಾಜಿಸ್ಟ್ರೇಟ್ ಅವರ ಮುಂದೆ ಇಬ್ಬರನ್ನು ಹಾಜರುಪಡಿಸಿದ್ದಾರೆ.

ಡೆಕ್ಕನ್ ಸಂಸ್ಥೆ ಮೇಲೆ ಐಪಿಸಿ ಸೆಕ್ಷನ್ 120 ಬಿ, 420, 468, 471 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಎಸ್ಪಿ ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.
ಕೆನರಾ ಬ್ಯಾಂಕ್(357.77 ಕೋಟಿ ಸಾಲ) ಸೇರಿದಂತೆ ಅನೇಕ ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದು ಹಿಂತಿರುಗಿಸದ ಆರೋಪವನ್ನು ರೆಡ್ಡಿ ಹೊತ್ತಿದ್ದಾರೆ. ಒಂದೇ ಆಸ್ತಿಯನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ಅಡವಿಟ್ಟು 1200 ಕೋಟಿ ರೂ. ಹಣ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದೆ.

ದಿವಾಳಿಯಾದ ಸಂಸ್ಥೆ: ಸಾಲದ ಕಾರಣ ಐಪಿಎಲ್ ನಲ್ಲಿ ಹೊಂದಿದ್ದ ತಂಡವನ್ನು ಮಾರಾಟ ಮಾಡಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಳಪೆ ಸಾಧನೆ ಮುಂದುವರೆಸಿತ್ತು. ನಂತರ ತಂಡವನ್ನು ಸನ್ ನೆಟ್ವರ್ಕ್ ಖರೀದಿಸಿ ಸನ್ ರೈಸರ್ಸ್ ಹೆಸರಿನಲ್ಲಿ ಐಪಿಎಲ್ ನಲ್ಲಿ ಕಣಕ್ಕಿಳಿಸಿದ್ದರು.

ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ಡೆಕ್ಕನ್ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ ಲಿ. (ಡಿಸಿಎಚ್ಎಲ್) ದಿವಾಳಿ ಅಂಚು ತಲುಪಿದ್ದು, ಕಂಪನಿಯ ಟ್ರೇಡ್ ಮಾರ್ಕ್ ಅನ್ನು ಐಡಿಬಿಐ ಬ್ಯಾಂಕ್ ಮತ್ತೊಮ್ಮೆ ಹರಾಜು ಹಾಕಲು ಸಿದ್ಧತೆ ನಡೆಸಿತ್ತು. ಡಿಸಿಎಚ್ ಎಲ್ ಪ್ರಕಟಣೆಯ ಡೆಕ್ಕನ್ ಕ್ರಾನಿಕಲ್, ದಿ ಏಷ್ಯನ್ ಏಜ್, ಆಂಧ್ರ ಭೂಮಿ ಹಾಗೂ ಫೈನಾನ್ಶಿಯಲ್ ಕ್ರಾನಿಕಲ್ ಟ್ರೇಡ್ ಮಾರ್ಕ್ ಗಳನ್ನು ಅಡಮಾನ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications