ತೆಲಂಗಾಣ ಸಿಎಂ ಫಾರ್ಮ್ ಹೌಸ್ ನಲ್ಲಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ
ಹೈದರಾಬಾದ್, ಅಕ್ಟೋಬರ್ 17: ತೆಲಂಗಾಣ ರಾಜ್ಯ ವಿಶೇಷ ಪೊಲೀಸ್ ಗೆ ಸೇರಿದ ಹೆಡ್ ಕಾನ್ಸ್ ಟೇಬಲ್, 38 ವರ್ಷದ ಎ. ವೆಂಕಟೇಶ್ವರಲು ಬುಧವಾರದಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಿಪೇಟ್ ನ ಎರವಲ್ಲಿಯಲ್ಲಿ ಈ ಫಾರ್ಮ್ ಹೌಸ್ ಇದ್ದು, ಕಾವಲುಗಾರರ ವಿಶ್ರಾಂತಿ ಗೃಹದಲ್ಲಿ 9 ಎಂ.ಎಂ. ಸರ್ವೀಸ್ ಕಾರ್ಬೈನ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ವೆಂಕಟೇಶ್ವರಲು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಿದ್ದಿಪೇಟ್ ಎಸ್ ಪಿ ಮಾಹಿತಿ ನೀಡಿದ್ದಾರೆ.
ಮದ್ಯವ್ಯಸನಿಯಾಗಿದ್ದ ವೆಂಕಟೇಶ್ವರಲು ಈಚೆಗಷ್ಟೇ ಮದ್ಯ ತ್ಯಜಿಸುವ ಶಿಬಿರದಲ್ಲಿ ಚಿಕಿತ್ಸೆ ಪಡೆದಿದ್ದರು. ಸೆಪ್ಟೆಂಬರ್ ಇಪ್ಪತ್ತೊಂಬತ್ತನೇ ತಾರೀಕು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಎರಡು ದಿನಗಳಿಂದ ಅನಧಿಕೃತ ರಜಾದಲ್ಲಿ ಇದ್ದ ಆತನನ್ನು ಪತ್ನಿಯ ಮನವಿ ಮೇರೆಗೆ ಕರ್ತವ್ಯಾಧಿಕಾರಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಆತ ಮದ್ಯಪಾನ ಮಾಡಿದ್ದರೇ ಎಂಬ ಸಂಗತಿಯು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications