ಮೇ 10ರಂದು ಮತದಾನ NWKRTC ಬಸ್ ಸಂಚಾರ ಎಂದಿನಂತೆ
ಹುಬ್ಬಳ್ಳಿ, ಮೇ 8; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮೇ 10ರ ಬುಧವಾರ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ ಸರ್ಕಾರಿ ಬಸ್‌ಗಳನ್ನು ನಿಯೋಜನೆ ಮಾಡುವುದರಿಂದ ಬಸ್ ಸಂಚಾರದಲ್ಲಿ ಮೇ 9 ಮತ್ತು 10ರಂದು ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೇ 9ರ ಮಂಗಳವಾರ ಮತ್ತು ಮೇ 10ರ ಬುಧವಾರ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೇ 10ರಂದು ವಿಧಾನಸಭೆ ಚುನಾವಣೆ ಕಾರ್ಯಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಅಂದಾಜು 1,500 ಬಸ್‌ಗಳನ್ನು ಓಡಿಸಲಾಗುತ್ತದೆ.

ಜನರ ಸಂಚಾರ ಕಡಿಮೆ; ಬುಧವಾರ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ರಜೆ ಘೋಷಿಸಿರುವ ಪ್ರಯುಕ್ತ ಸಹಜವಾಗಿ ಪ್ರಯಾಣಿಕರ ಓಡಾಟ ಕಡಿಮೆ ಇರಲಿದೆ. ಆದ್ದರಿಂದ ಎಲ್ಲಾ ಡಿಪೋಗಳಲ್ಲಿ ಲಭ್ಯವಿರುವ ಬಸ್, ಚಾಲಕ ಮತ್ತು ನಿರ್ವಾಹಕರನ್ನು ಬಳಕೆ ಮಾಡಿಕೊಂಡು ಎಂದಿನಂತೆ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.
ವಿದ್ಯಾರ್ಥಿಗಳಿಗಾಗಿಯೇ ಸಂಚಾರ ನಡೆಸುವ ಹಲವು ಬಸ್‌ಗಳನ್ನು ರದ್ದುಗೊಳಿಸಿ ಪ್ರಯಾಣಿಕರ ಬೇಡಿಕೆ ಇರುವ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಬಸ್‌ಗಳಿಗಾಗಿ ಬೇಡಿಕೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 7760991687 ಕ್ಕೆ ಕರೆ ಮಾಡಬಹುದಾಗಿದೆ.

ಮತದಾನದ ದಿನ ಎಲ್ಲಾ ದೂರ ಮಾರ್ಗದ ಹಾಗೂ ರಾತ್ರಿ ಸಾರಿಗೆಯ ಎಲ್ಲಾ ಪ್ರತಿಷ್ಠಿತ ಬಸ್‌ಗಳ ಸಂಚಾರ ಲಭ್ಯವಿರುತ್ತದೆ. ಮುಂಗಡ ಬುಕ್ಕಿಂಗ್ ಮಾಡಿರುವ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಬಸ್ ಸಂಚಾರದಲ್ಲಿ ವ್ಯತ್ಯಯ; ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನದ ಹಿನ್ನಲೆಯಲ್ಲಿ ಚುನಾವಣೆ ಕಾರ್ಯಕ್ಕೆ ಬಳ್ಳಾರಿ ವಿಭಾಗದಿಂದ ಒಟ್ಟು 200 ಬಸ್‍ಗಳನ್ನು ಸಾಂಧರ್ಬಿಕ ಒಪ್ಪಂದದ ಮೆಲೆ ಒದಗಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಮೇ 9 ಮತ್ತು 10ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡುತಿನಿ, ಕಂಪ್ಲಿ, ಸಂಡೂರು ಭಾಗಗಳಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್‍ಗಳ ದೈನಂದಿನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ.
ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ಎಂ. ದೇವರಾಜು ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಮತದಾನದ ಹಿನ್ನಲೆಯಲ್ಲಿ ಮಾಸ್ಟರಿಂಗ್ ಕಾರ್ಯ ಮಂಗಳವಾರ ಮಧ್ಯಾಹ್ನ ನಡೆಯಲಿದೆ. ಸಂಜೆಯ ವೇಳೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತಯಂತ್ರದ ಜೊತೆಗೆ ಮತಗಟ್ಟೆಗೆ ತೆರಳಲಿದ್ದಾರೆ. ಬುಧವಾರ ಮತದಾನ ಮುಗಿದ ಬಳಿಕ ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಆದ್ದರಿಂದ ಎರಡು ದಿನ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಅಭ್ಯರ್ಥಿಗಳು ಮನೆ ಮನೆ ಪ್ರಚಾರವನ್ನು ಕೈಗೊಳ್ಳಬಹುದಾಗಿದೆ. ಎಲ್ಲಾ ಅರ್ಹ ಮತದಾರರು ಬುಧವಾರ ತಪ್ಪದೇ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಕರೆ ನೀಡಿದೆ.












Click it and Unblock the Notifications