ಅಮ್ಮ ಬೇಕು ಎಂದು ಹಟ ಮಾಡಿದ್ದಕ್ಕೆ ಬಾಲಕನಿಗೆ ಬರೆ ಎಳೆದ ಆಯಾ, ಶಿಕ್ಷಕ
ಹುಬ್ಬಳ್ಳಿ, ಆಗಸ್ಟ್.30:ಅಮ್ಮ ಬೇಕು...ಎಂದು ಹಟ ಹಿಡಿದ ನಾಲ್ಕು ವರ್ಷದ ಬಾಲಕನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, "ಅಮ್ಮ ಬೇಕು ಎಂದು ಹಟ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ" ಎಂದು ಬಾಲಕನ ತಾಯಿ ಕಾವೇರಿ ಆರೋಪಿಸಿದ್ದಾರೆ.
ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ ನಾಯ್ಡು ಎಂಬುವವರು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35 ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೆ ಕಾವೇರಿ ಎಂಬ ಮಹಿಳೆ ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ.

ಆದರೆ ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು... ಅಂತ ಹಟ ಮಾಡಿದ್ದನಂತೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಎಂದು ಬಾಲಕನ ತಾಯಿ ಆರೋಪಿಸಿದ್ದಾಳೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ ನಾಯ್ಡು ಹಾಗೂ ಆಯಾ ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಬಾಲಕನ ತಾಯಿ ಕಾವೇರಿ ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications