ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪ್ರತಿಭಟನೆ ಬಿಸಿ
ಹುಬ್ಬಳ್ಳಿ, ಅಕ್ಟೋಬರ್ 05: ಇಂದು ಹುಬ್ಬಳ್ಳಿಗೆ ಆಗಮಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಭಟನೆಯ ಬಿಸಿ ಮುಟ್ಟಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ನಿರ್ಮಲಾ ಸೀತಾರಾಮನ್ ಅವರು ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿದ್ದರು. ಅವರು ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆ ಬಿಸಿ ಎದುರಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರು ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪರಿಹಾರ ಹಣ ಕಡಿಮೆ ಕೊಟ್ಟಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಆದರೆ ಅವರನ್ನು ವಶಕ್ಕೆ ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಹಲವು ಸಂಘಟನೆಗಳು ಭರಪೂರ ಮನವಿಗಳನ್ನು ಸಲ್ಲಿಸಿದರು. ಭಾರಿ ಸಂಖ್ಯೆಯಲ್ಲಿ ಸಂಘಟನೆಗಳು, ಜನರು ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದರು.
ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿರುವ ರಾಷ್ಟ್ರೀಯ ತೆರಿಗೆ ಸಲಹೆಗಾರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಿರ್ಮಲಾ ಸೀತಾರಾಮನ್ ತೆರಳಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ ಉಪಸ್ಥಿತಿತರಿದ್ದರು.












Click it and Unblock the Notifications