ಕುಂದಗೋಳ ಶಾಸಕಿ ವಿರುದ್ಧ ಅಸಾಂವಿಧಾನಿಕ ಭಾಷೆ ಬಳಸಿ ಆಕ್ರೋಶ: ಟಿಕೆಟ್‌ಗಾಗಿ ಲಾಬಿ
ಹುಬ್ಬಳ್ಳಿ, ಏಪ್ರಿಲ್ 03: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಸುತ್ತಿದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರವು ರಂಗೇರುತ್ತಿದೆ. ಹಾಲಿ ಶಾಸಕಿಯ ವಿರುದ್ಧ ಕಾಂಗ್ರೆಸ್ ಪಾಳೆಯದಲ್ಲಿಯೇ ಟಿಕೆಟ್ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಯೊಬ್ಬರು ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸೋಮವಾರ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಶಿವಾನಂದ ಬೆಂತೂರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಕುಂದಗೋಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಜೆ. ಪಾಟೀಲ ಎಂಬುವವರು ಕಾಂಗ್ರೆಸ್ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧವೇ ಅಸಂವಿಧಾನಿಕ ಭಾಷೆ ಬಳಸಿದ್ದಾರೆ. ಈ ಮೂಲಕ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.

ತರಾಟೆ ಬಳಿಕ ಕ್ಷಮೆಯಾಚನೆ
ಈಗಾಗಲೇ ಕುಸುಮಾವತಿ ಶಿವಳ್ಳಿಯವರ ವಿರುದ್ಧ ಬಂಡಾಯ ಚುನಾವಣೆ ಸಾರಲು ಸಿದ್ಧವಾಗಿರುವ ಹತ್ತು ಜನರ ತಂಡದಲ್ಲಿ ಸಿ.ಜೆ.ಪಾಟೀಲ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅನೇಕ ಮಾಧ್ಯಮದವರು ಉಪಸ್ಥಿತರಿದ್ದರು. ಅವರ ಮುಂದೇಯೆ ಅಸಂವಿಧಾನಿಕ ಭಾಷೆ ಬಳಸಿದ್ದಾರೆ. ಇದನ್ನು ಖಂಡಿಸಿ ಸ್ಥಳದಲ್ಲಿದ್ದ ಪತ್ರಕರ್ತರು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಕಾಂಗ್ರೆಸ್ ಮುಖಂಡರು ಕ್ಷಮೆಯಾಚನೆ ಮಾಡಿರುವುದು ನಿಜಕ್ಕೂ ವಿಷಾದಕರ.
ದಿನೇ ದಿನೆ ಚುನಾವಣೆ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷದ ಪ್ರತಿಷ್ಟೆಗಿಂತ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿ ಮಾರ್ಪಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧ ಅಸಂವಿಧಾನಿಕ ಭಾಷೆ ಬಳಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಟಿಕೆಟ್ ಆಕಾಂಕ್ಷಿಯಾಗಿರುವ ಒಬ್ಬ ಮುಖಂಡ ಹಾಲಿ ಶಾಸಕರಿಗೆ ಅದರಲ್ಲೂ ಮಹಿಳಾ ಶಾಸಕರಿಗೆ ಈ ರೀತಿ ಭಾಷೆ ಬಳಸಿ ನಿಂದನೆ, ವೈಯಕ್ತಿಕ ಮತ್ತು ಪ್ರತಿಷ್ಠೆ ಕಾರಣಕ್ಕೆ ಮಾತನಾಡುವುದು ಸರಿಯಲ್ಲ ಎಂದು ಕುಸುಮಾವತಿ ಶಿವಳ್ಳಿಯವರ ಬೆಂಬಲಿಗರು ದೂರಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನಲ್ಲಿ ಕುಂದಗೋಳ ಟಿಕೆಟ್‌ಗೆ ಲಾಭಿ
ಇತ್ತ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆ ಆಗಿಲ್ಲ. ಈ ಮದ್ಯೆ ಟಿಕೆಟ್ ಗಾಗಿ ಲಾಭಿ ನಡೆಯುತ್ತಿದೆ. ಹಾಲಿ ಶಾಸಕಿಯವರು ಟಿಕೆಟ್‌ಗೆ ಲಾಭಿ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಇತರ ಟಿಕೆಟ್ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕುಂದಗೋಳ ಕ್ಷೇತ್ರವು ಯಾವೊಂದು ಪ್ರಮುಖ ರಾಜಕೀಯ ಪಕ್ಷಗಳ ಭದ್ರಕೋಟೆ ಆಗಿ ಗುರುತಿಸಿಕೊಂಡಿಲ್ಲ. ಆದರೆ ಈ ಕ್ಷೇತ್ರದಲ್ಲಿ ಹಿಂದಿನಿಂದಲೇ ಗೆದ್ದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆ ಹೆಚ್ಚು ಗಮನ ಸೆಳೆದಿದ್ದಾರೆ. ಶಾಸಕರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನದ ನಂತರ ನಡೆದ ಉಪಚುನಾವಣೆ ಸೇರಿದಂತೆ ಹಿಂದಿನ ಮೂರು ಚುನಾವಣೆಗಳಲ್ಲಿ ಪಕ್ಷ ಗೆದ್ದಿದ್ದರೂ ಗೆಲುವಿನ ಅಂತರ ಅಷ್ಟಾಗಿಲ್ಲ. ಅಂದರೆ ತೀರಾ ಬಹುಮತದಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ ಈ ಬಾರಿ ಪಕ್ಷಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಸ್. ಶಿವಳ್ಳಿಯವರು ಕೇವಲ 634 ಮತಗಳಿಂದ ಗೆದ್ದಿದ್ದರು. ಅವರ ನಿಧನಾ ನಂತರ ನಡೆದ ಉಪ ಚುನಾವಣೆಯಲ್ಲಿ ಅನುಕಂಪದ ಅಲೆಯಿದ್ದರೂ ಅವರ ಪತ್ನಿ ಕುಸುಮಾವತಿ ಶಿವಳ್ಳಿಯವರು ಕೇವಲ 1,601 ಕಡಿಮೆ ಮತದಾಗಳ ಅಂತರದಿಂದ ವಿಜಯ ಸಾಧಿಸಿದ್ದರು.
ಈ ಸಲವು ಕುಸುಮಾವತಿ ಶಿವಳ್ಳಿಯವರು ತಮಗೆ ಟಿಕೆಟ್ ನೀಡುವಂತೆ ಮುಖಂಡ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕುಂದಗೋಳ ಕ್ಷೇತ್ರದ ಟಿಕೆಟ್‌ಗಾಗಿ ದೊಡ್ಡಮಟ್ಟದಲ್ಲಿ ಲಾಭಿ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿಯೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿನ ಟಿಕೆಟ್ ಗದ್ದಲದ ಲಾಭವನ್ನು ಬಿಜೆಪಿ ಪಡೆದುಕೊಳ್ಳಲು, ಇಲ್ಲಿ ಜಯಿಸಲು ಯತ್ನಿಸುತ್ತಿದೆ.












Click it and Unblock the Notifications