BJP Candidates List : ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಮಾರ್ಚ್ 28: ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುತ್ತದೆ. ಚುನಾವಣೆಗೂ ಮುನ್ನವೇ ನಮ್ಮಲ್ಲಿ ಟಿಕೆಟ್ ಘೋಷಣೆ ಮಾಡಲ್ಲ. ಪ್ರತಿ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಈ ಬಾರಿ ಹಾಲಿ ಶಾಸಕರ ಟಿಕೆಟ್ ಕೊಡಲ್ಲ ಎನ್ನುವ ಮಾತು ಯಾಕೆ ಸೃಷ್ಟಿ ಆಗಿದೆ ಗೊತ್ತಿಲ್ಲ. ವಯಸ್ಸು, ಗೆಲ್ಲುವ ಮಾನದಂಡ ಇತ್ಯಾದಿ ಕಾರಣಗಳಿಂದಾಗಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಬಹುದು. ಕೆಲವರು ತಾವಾಗಿಯೇ ಹಿಂದೆ ಸರಿಯಬಹುದು ಎಂದರು.

ಒಳ ಮೀಸಲಾತಿ ವಿರೋಧಿಸಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆಯ ಬಗ್ಗೆ ಮಾತನಾಡಿದ ಅವರು, ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಈ ರೀತಿಯ ಕಲ್ಲುತೂರಾಟ ಪ್ರಕರಣ ನಡೆಯಬಾರದಿತ್ತು. ಒಳಮೀಸಲಾತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಪ್ರಕ್ರಿಯೆ ಮಾಡಲಾಗಿದೆ. ಒಳ ಮೀಸಲಾತಿ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಒಳ ಮೀಸಲಾತಿ ಕುರಿತು ಗೊಂದಲದಿಂದಾಗಿ ಈ ಘಟನೆ ಸಂಭವಿಸಿದೆ. ಆದರೆ ಕಾಂಗ್ರೆಸ್ ಇದರಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಾಹುಲ್ ಗಾಂಧಿ ಕೋಲಾರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ , ರಾಹುಲ್ ಗಾಂಧಿ ಬಂದಷ್ಟು ಕಾಂಗ್ರೆಸ್ ಅವಸಾನಕ್ಕೆ ಕಾರಣವಾಗುತ್ತದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಬಂದಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಿದೆ. ರಾಹುಲ್ ಗಾಂಧಿ ಬಂದು ಹೋಗುವುದರಿಂದ ಬಿಜೆಪಿಗೆ ಏನು ತೊಂದರೆ ಇಲ್ಲ ಎಂದು ರಾಜ್ಯಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ವಿರುದ್ಧ ವ್ಯಂಗ್ಯವಾಡಿದರು.

ಬಂಜಾರ, ಭೋವಿ ಸಮಾಜದವರ ಅಪೇಕ್ಷೆಗಿಂತ ಹೆಚ್ಚಿನ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕೊಟ್ಟಿದೆ
ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದವರು ಸೋಮವಾರ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ಪ್ರತಿಭಟನಾಕಾರರು ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಅಲ್ಲದೇ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ಬ್ಯಾನರ್ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬಂಜಾರ ಮತ್ತು ಭೋವಿ ಸಮಾಜದವರು ಮೊದಲು ಶೇ.3 ರಷ್ಟು ಮೀಸಲಾತಿ ಕೇಳಿದ್ದರು. ಆದರೆ, ಬಿಜೆಪಿ ಸರ್ಕಾರ ಅವರು ಅಪೇಕ್ಷೆ ಪಟ್ಟಿದ್ದಕ್ಕಿಂತ ಶೇ.4.5 ರಷ್ಟು ಹೆಚ್ಚಿನ ಮೀಸಲಾತಿ ಕೊಟ್ಟಿದೆ ಎಂದರು.

ಕೆಲವು ಪಂಗಡಗಳಿಗೆ ಮೊದಲು ಸಂಶಯಗಳಿದ್ದವು ಆ ಸಂಶಯದಲ್ಲಿ ಭೋವಿ ಹಾಗೂ ಬಂಜಾರ ಸಮುದಾಯದವರೂ ಇದ್ದರು. ಬೇರೆಯವರಿಗೆ ಮೀಸಲಾತಿ ಕೊಟ್ಟರೆ ಇವರಿಗೆಲ್ಲ ಒಳಮೀಸಲಾತಿ ಕಡಿಮೆ ಆಗುತ್ತದೆ ಎಂಬ ಸಂಶಯ ಅವರಿಗಿದೆ. ಆ ಸಮಾಜದ ಶಾಸಕರು ಅನೇಕ ಬುದ್ಧಿಜೀವಿಗಳನ್ನು ಕರೆಯಿಸಿ ಕೇಳಿದ್ದರು. ಮೂಲ ಬಂಜಾರ ಹಾಗೂ ಭೋವಿ ಸಮಾಜದ ನಾಯಕರು ಅಪೇಕ್ಷೆ ಪಟ್ಟಿದ್ದಕ್ಕಿಂತ ಹೆಚ್ಚಿನ ಮೀಸಲಾತಿ ಅವರಿಗೆ ನೀಡಲಾಗಿದೆ. ಆದರೆ, ವಿರೋಧ ಪಕ್ಷ ಕಾಂಗ್ರೆಸ್ ಭೋವಿ, ಬಂಜಾರ ಎಂದು ದಾಂಧಲೆ ಹಾಕಿಸುವ ಕೆಲಸ ಶುರು ಮಾಡಿಕೊಂಡಿದೆ. ಇನ್ನೊಂದಿಷ್ಟು ದಿನ ಈ ರೀತಿ ದಾಂಧಲೆ ಮಾಡುತ್ತಾರೆ. ಈ ರೀತಿ ದಾಂಧಲೆ ಮಾಡುವವರು ಸಮಾಜದ ಹಿತಚಿಂತಕರಲ್ಲ ಎಂದು ಹೇಳಿದ್ದಾರೆ.












Click it and Unblock the Notifications