ಕಾಂಗ್ರೆಸ್, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಮಾರ್ಚ್ 30: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಅನಿಲ ಭಾಗ್ಯ ಯೋಜನೆಯ ಗ್ಯಾಸ್ ಸ್ಟೌವ್ ಹಂಚಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಆಯೋಗವು ಇದಕ್ಕೆ ಅವಕಾಶ ಕೊಡಬಾರದು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನಿಲ ಭಾಗ್ಯವನ್ನು ತರಾತುರಿಯಲ್ಲಿ ಜಾರಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರ ಖರೀದಿಸಿದ್ದ ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು ರಾಜ್ಯಕ್ಕೆ ಬಂದಿದ್ದು, ಅವುಗಳನ್ನು ದಾಸ್ತಾನು ಮಾಡಿ ಇಡಲಾಗಿದೆ. ಚುನಾವಣೆ ನೀತಿ ಸಂಹಿತೆ ಇದ್ದರೂ ಸಹ ಇವುಗಳನ್ನು ವಿತರಣೆ ಮಾಡಲು ತಯಾರಿ ನಡೆಸಿದೆ ಎಂದು ಅವರು ದೂರಿದರು.
ಒಂದು ಲಕ್ಷ ಗ್ಯಾಸ್ ಸ್ಟೌವ್‌ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ, ಇದರ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಅವರು ಹೇಳಿದರು.

ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿಲ್ಲ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು.
'ಸಿದ್ದರಾಮಯ್ಯ ಅವರ ಸರ್ಕಾರ ರೈತರ ಸಾಲಮನ್ನಾ ವಿಚಾರದಲ್ಲಿ 2878 ಕೋಟಿ ರೂಪಾಯಿ ಮಾತ್ರ ಸೊಸೈಟಿಗಳಿಗೆ ಪಾವತಿ ಮಾಡಿದೆ. ಇನ್ನೂ 5282 ಕೋಟಿ ರೂಪಾಯಿ ಕೊಡುವುದು ಬಾಕಿ ಇದೆ. ಇದರಿಂದ ರೈತರಿಗೆ ಸಾಲ ಸಿಗದೇ ತೊಂದರೆಯಾಗುತ್ತಿದೆ' ಎಂದು ಅವರು ಆರೋಪಿಸಿದರು.











Click it and Unblock the Notifications