ನಾನು ಯಾವುದೇ ಕಂಡೀಷನ್ ಇಲ್ಲದೆ ಕಾಂಗ್ರೆಸ್‌ಗೆ ಬಂದಿದ್ದೇನೆ, ಯಾವ ಜವಾಬ್ದಾರಿ ನೀಡಿದ್ರೂ ನಿಭಾಯಿಸಲು ಸಿದ್ಧ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಮೇ, 28: ಕಾಂಗ್ರೆಸ್ ಪಾರ್ಟಿಗೆ ಅನ್ ಕಂಡೀಷನ್ ಆಗಿ ಬಂದಿದ್ದೇನೆ. ಕ್ಯಾಬಿನೆಟ್‌ನಲ್ಲಿ ನಾನು ಮಿನಿಸ್ಟರ್ ಆಗಬೇಕು ಎನ್ನುವುದು ಜನರ ಅಭಿಲಾಷೆ ಆಗಿತ್ತು. ಹಲವು ಕಾರಣದಿಂದ ಆಗಿಲ್ಲ. ಇನ್ನೂ ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಿನ ಸಂಪುಟ ರಚನೆ ನಂತರ ಕೂತು ಚರ್ಚಿಸುವ ಬಗ್ಗೆ ಮಾತಾಗಿದೆ. ವೈಯಕ್ತಿಕವಾಗಿ ನಾನು ಯಾವುದೇ ಆಸೆಯನ್ನು ವ್ಯಕ್ತಪಡಿಸಿಲ್ಲ ಎಂದರು. ಹಾಗೆಯೆ ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ ಎಂದರು.

ಕಾಂಗ್ರೆಸ್‌ಗೆ ಜನ ಬೆಂಬಲ ನೀಡಿದ್ದಾರೆ. ಒತ್ತಡದಲ್ಲಿ ಸ್ಥಾನಮಾನ ಕೊಡಲು ಆಗಲಿಲ್ಲ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತದೆ ಅದನ್ನು ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿವೆ. ಸಾಕಷ್ಟು ಅವಕಾಶಗಳು ಉತ್ತರ ಕರ್ನಾಟಕದವರಿಗೆ ಸಿಕ್ಕಿವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಒಂದು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದನ್ನು ಪ್ರತಿಪಕ್ಷದವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ. ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತದೆ. ಎಂಪಿ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆದಿದೆ ಎಂದರು.
ತಮ್ಮ ಸೋಲಿನ ಬಗ್ಗೆ ಮಾತನಾಡಿದ ಅವರು, ನನ್ನ ಸೋಲಿಗೆ ಕಾರಣವಾದದ್ದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಹಿರಿಯ ನಾಯಕರೊಂದಿಗೆ ಚರ್ಚೆಯಾಗಿಲ್ಲ. ಸವದಿ ಹಾಗೂ ನನಗೂ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಆಗಿಲ್ಲ. ಬಿಜೆಪಿಯಲ್ಲಿ ಪಕ್ಷ ಕಟ್ಟುವಂತವರು ಯಾರಿದ್ದಾರೆ? ರಾಜ್ಯದಲ್ಲಿ ಬಿಜೆಪಿಯನ್ನು ಈ ಪರಿಸ್ಥಿತಿಗೆ ತರಲು ಕಾರಣರಾದವರು ಈಗ ಎಲ್ಲಿದ್ದಾರೆ. ಇನ್ನೂ ನನ್ನ ಪ್ರಶ್ನೆಗೆ ಯಾರು ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ಈಗ ನಾಪತ್ತೆ ಆಗಿದ್ದಾರೆಂದು ಹೇಳುವ ಮೂಲಕ ಪರೋಕ್ಷವಾಗಿ ಬಿ.ಎಲ್.ಸಂತೋಷಗೆ ಟಾಂಗ್ ನೀಡಿದರು.
ವಿರೋಧ ಪಕ್ಷದ ನಾಯಕನ್ನನು ಆರಿಸಲು ಯಾರಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಅಲ್ಲದೆ ಆರ್‌ಎಸ್‌ಎಸ್ ಬಜರಂಗದಳ ಬ್ಯಾನ್ ಯಾರು ಮಾಡಿದ್ದಾರೆ ಎಂದು ಅವರು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಪಸಭಾಪತಿ ಹುದ್ದೆ ಬೇಡ
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಸಂಪುದಲ್ಲಿ ಸಚಿವರಾಗಿ 24 ಜನ ಪ್ರಮಾಣ ವಚನ ಸ್ವೀಕರಿಸಿದ್ದು, ಮತ್ತೊಂದೆ ಸಚಿವ ಸ್ಥಾನ ಸಿಗದಿದ್ದಕ್ಕೆ ಈಗಾಗಲೇ ಕಾಂಗ್ರೆಸ್‌ನಲ್ಲಿ ಹಲವರು ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಸಿ.ಪುಟ್ಟರಂಗಶೆಟ್ಟಿಗೆ ಉಪಸಭಾಪತಿ ಹುದ್ದೆಯನ್ನು ನೀಡಲಾಗಿತ್ತು. ಆದರೆ ಇದೀಗ ಅವರು ನನಗೆ ಈ ಹುದ್ದೆ ಬೇಡ ಎಂದು ತಿಸ್ಕರಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಸ್ಥಾನ ನನಗೆ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎನ್ನುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ಈ ಮೊದಲು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿದೆ. ಇದಕ್ಕೆ ಕಾರಣ ಏನೆಂದು ಗೊತ್ತಿಲ್ಲ. ಸಚಿವ ಸ್ಥಾನ ನೀಡದ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಡೆಪ್ಯುಟಿ ಸ್ಪೀಕರ್ ಸ್ಥಾನ ನೀಡಿದೆ. ಆ ಹುದ್ದೆ ನನಗೆ ಬೇಡ. ಡೆಪ್ಯುಟಿ ಸ್ಪೀಕರ್ ಸ್ಥಾನ ಕಾರ್ಯಭಾರದ ಒತ್ತಡದಿಂದ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದರು.
ಡೆಪ್ಯುಟಿ ಸ್ಪೀಕರ್ ಆದರೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಆಗುವುದಿಲ್ಲ. ಆದ್ದರಿಂದ ಡೆಪ್ಯುಟಿ ಸ್ಪೀಕರ್ ಸ್ಥಾನ ಬೇಡ ಎಂಬುದು ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರ ಒತ್ತಾಯ ಆಗಿದೆ. ನಾನು ಉಪ್ಪಾರ ಸಮಾಜದ ಏಕೈಕ ಶಾಸಕ. ಯಾವಾಗಲೂ ಜನರ ಜೊತೆ ಬೆರೆತು ಕೆಲಸ ಮಾಡುವವನು ಆಗಿದ್ದೇನೆ. ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ನನಗೆ ಒತ್ತಾಯಿಸಿದ್ದರು. ಆದರೆ ನಾನು ನಯವಾಗಿಯೇ ಆ ಹುದ್ದೆಯನ್ನು ತಿರಸ್ಕರಿಸಿದೆ ಎಂದರು.












Click it and Unblock the Notifications