Rain Alert: ಹುಬ್ಬಳ್ಳಿಯಲ್ಲಿ ಮಂಗಳವಾರ ಮಳೆ ಆರ್ಭಟ: ರಸ್ತೆಗಳು ಜಲಾವೃತ: ಮುನ್ಸೂಚನೆ ವಿವರ
ಹುಬ್ಬಳ್ಳಿ, ಮೇ 14: ಭೂಮಿ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಪರಿಣಾಮ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಮಳೆಯಾರ್ಭಟ ಜೋರಾಗಿಯೇ ಇತ್ತು. ಮಧ್ಯಾಹ್ನದ ನಂತರ ಆರಂಭವಾದ ಮಳೆಗೆ ಪ್ರಮುಖ ರಸ್ತೆಗಳು ಕೆರೆಯಂತಾಗಿ ಸಮಸ್ಯೆ ಉಂಟಾಯಿತು. ಕೆಲವೆಡೆ ಜನ ಜೀವನ ಅಸ್ತವ್ಯಸ್ತವಾಯಿತು.
ನಿರಂತರ ಒಣಹವೆ, ಮೈಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ ಜನರಿಗೆ ಮಳೆ ಮಂಗಳವಾರ ಮತ್ತೆ ತಂಪೆರೆಯಿತು. ಸಂಜೆ 4.30ಕ್ಕೆ ಆರಂಭವಾದ ಮಳೆ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು. ಗುಡುಗು, ಸಿಡಿಲು, ಮಿಂಚು ಮತ್ತು ಭಾರೀ ಗಾಳಿ ಸಹಿತ ವರುಣ ಆರ್ಭಟ ಕಂಡು ಬಂತು.

ಮಳೆಯಿಂದಾಗಿ ವಾತಾವರಣವೇನೋ ಹಿತವೆನಿಸಿತು. ಆದರೆ ತಗ್ಗು ಪ್ರದೇಶದ ಮನೆ, ಅಪಾರ್ಟಮೆಂಟ್, ವಸತಿ ಬಡಾವಣೆಗಲ್ಲಿ ನೀರು ಆವಾಂತರಗಳು ಸೃಷ್ಟಿಯಾದವು. ಮೊನ್ನೆ ಶನಿವಾರಷ್ಟೇ ಬಂದ ಮಳೆಗೆ, ಆದ ಹಾನಿಯಿಂದ ಸುಧಾರಿಸಿಕೊಳ್ಳುತ್ತಿದ್ದ ಜನರಿಗೆ ಇಂದಿನ ಮಳೆ ಮತ್ತೆ ಸಂಕಷ್ಟ ತಂದೊಡ್ಡಿತು.
ಮಳೆ ಆರ್ಭಟದಿಂದ ವ್ಯಾಪಾರಕ್ಕೆ ಹೊಡೆತ
ಕೆಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಕಳೆದ ಬಾರಿ ಬಿದ್ದ ಮಳೆಯ ತೊಂದರೆಯಿಂದ ಹೊರ ಬಾರದ ಜನರು ಇಂದು ಮತ್ತೆ ವರುಣನ ರುದ್ರನರ್ತನೆಕ್ಕೆ ಸಿಲುಕಿದ್ದಾರೆ.
ಹುಬ್ಬಳ್ಳಿಯ ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ದಾಜಿಬಾನಪೇಟ, ಕಮರಿಪೇಟ, ಮೇದಾರ ಓಣಿ, ಹಳೇಹುಬ್ಬಳ್ಳಿ, ಮೂರುಸಾವಿರ ಮಠ, ಬಂಕಾಪುರ ಚೌಕ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ಅಲ್ಲದೇ ಬೀದಿಬದಿ ವ್ಯಾಪಾರ, ವಾಣಿಜ್ಯ ಮಳಿಗೆಗಳಿಗೂ ಹಾನಿ ಮಾಡಿದೆ. ರಸ್ತೆಗಳೆಲ್ಲ ತುಂಬಿ ಹರಿದವು. ಇದರಿಂದ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.
ಮಳೆಗಾಲಕ್ಕು ಮುನ್ನವೇ ನಲುಗಿದ ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ-ಧಾರವಾಡದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ನಡೆಯುತ್ತಿವೆ. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಕೇವಲ ಒಂದು ಮಳೆಗೆ ಹೀಗಾದರೆ ಹೇಗೆ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಈ ರೀತಿ ಆದರೆ ಜೂನ್ ನಂತರದ ದಿನಗಳು ಹೇಗಿರಲಿವೆ ಎಂದು ನೆನಪಿಸಿಕೊಂಡರೆ ಭಯ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇನ್ನು ವಿದ್ಯಾನಗರ, ಕೊಪ್ಪೀಕರ್ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಜೋರು ಮಳೆ ಸುರಿಯಿತು. ಬಿರುಗಾಳಿ ಸಹಿತ ಬಂದ ಮಳೆಗೆ ಅನೇಕ ಕಡೆಗಳಲ್ಲಿ ಇಂದು ಸಹ ಮರಗಳು ಉರಳಿ ಬಿದ್ದವು, ಕೊಂಬೆಗಳು ಮುರಿದು ಬಿದ್ದವು. ಪಾಲಿಕೆ ಸಿಬ್ಬಂದಿ ಅವುಗಳ ತೆರವು ಕಾರ್ಯ ಮಾಡುತ್ತಿದ್ದಾರೆ.
ಮೇ 18ರವರೆಗೂ ಭಾರೀ ಮಳೆ ಸಂಭವ
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಮೇ 18ರವರೆಗೂ ಇದೇ ರೀತಿ ಮಳೆ ಬರಲಿದೆ. ದಿನ ಬಿಟ್ಟು ದಿನ ಜೋರು ಮಳೆ ಬರಲಿದೆ. ಒಂದಷ್ಟು ಕಡೆಗಳಲ್ಲಿ ಸಾಧಾರಣ ಮಳೆಯಾದರೆ, ಕೆಲವು ಪ್ರದೇಶಗಳಲ್ಲಿ ಭರ್ಜರಿ ಮಳೆ ಆಗುವ ಲಕ್ಷಣಗಳು ಇವೆ. ಈ ಅವಧಿಯಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನ 37 ಹಾಗೂ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications