ಭೈರಿದೇವರಕೊಪ್ಪ ದರ್ಗಾದ ಗೋರಿ ಸ್ಥಳಾಂತರ: ಮುಸ್ಲಿಂ ಮುಖಂಡರ ಆಕ್ರೋಶ
ಹುಬ್ಬಳ್ಳಿ, ಡಿಸೆಂಬರ್ 22 : ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆ ಹಿನ್ನೆಲೆಯಲ್ಲಿ ಬಹು ಚರ್ಚಿತ ನಗರದ ಭೈರಿದೇವರಕೊಪ್ಪದ ದರ್ಗಾದ ಮೂರು ಗೋರಿಗಳನ್ನು ಮುಸ್ಲಿಂ ವಿಧಿವಿಧಾನಗಳ ಮೂಲಕ ಪೊಲೀಸರ ಸರ್ಪಗಾವಲಿನಲ್ಲಿ ಸ್ಥಳಾಂತರ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಗಾ ತೆರವು ಕಾರ್ಯಾಚರಣೆ ಎರಡನೇ ದಿನ ಮುಂದುವರೆದಿದ್ದು, ದರ್ಗಾ ಕಾಣದಂತೆ ಸುತ್ತಲೂ ತಗಡಿನ ಹೊದಿಕೆಯನ್ನು ನಿರ್ಮಿಸಲಾಗಿದೆ. ಗೋರಿ ಸ್ಥಳಾಂತರ ಕಾರ್ಯವನ್ನು ಮಿಷನ್ ಮೂಲಕ ಮಾಡಬೇಕಾಗಿತ್ತು. ಆದರೆ ಮಿಷನ್ ಇಲ್ಲದ ಕಾರಣ ಗುರುವಾರ ಗೋರಿಗಳನ್ನು ಯಥಾವತ್ತಾಗಿ ಗುಪ್ತವಾಗಿ ಸ್ಥಳಾಂತರ ನಡೆಸಿದ್ದಾರೆ ಎನ್ನಲಾಗಿದೆ.
ದರ್ಗಾ ತೆರವು ಕಾರ್ಯಾಚರಣೆಯಲ್ಲಿ ಧಾರ್ಮಿಕ ವಿಧಿವಿಧಾನ ಪೂರೈಸಿ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ಗೋರಿ ಮತ್ತು ಇಬ್ಬರು ಸೇವಕರ ಗೋರಿಗಳ ಸ್ಥಳಾಂತರ ಕಾರ್ಯ ನಡೆದಿದೆ. ಗೋರಿಗಳನ್ನು ದರ್ಗಾ ಮಂಡಳಿ ಸೂಚಿಸುವ ಸ್ಥಳಕ್ಕೆ ಸ್ಥಳಾಂತರ ಮಾಡಲು ಸಿಬ್ಬಂದಿ ತೀರ್ಮಾನಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಹುಬ್ಬಳ್ಳಿ- ಧಾರವಾಡ ರಸ್ತೆಯ ಭೈರಿದೇವರಕೊಪ್ಪದ ಮಾರ್ಗದ ಬದಲಾವಣೆ ಗುರುವಾರ ಸಹ ಮುಂದುವರೆದಿದೆ.

ಕಾರ್ಯಾಚರಣೆ ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಭುರಾಮ್ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು. ಸಿಬ್ಬಂದಿಗೆ ಕರ್ತವ್ಯದ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಈ ವೇಳೆ ಆಗಮಿಸಿದ ವ್ಯಕ್ತಿಯೊಬ್ಬ ಕಮಿಷನರ್ ಮುಂದೆ ಅಸಮಾಧಾನ ಹೊರಹಾಕಿದ್ದು, ಸಿಪಿ ವಿನೋದ್ ಮುಕ್ತೇದಾರ್ ಆತನನ್ನು ಸಮಾಧಾನ ಪಡಿಸಿ ವಾಪಸ್ ಕಳುಹಿಸಿದ್ದಾರೆ.
300 ವರ್ಷಗಳ ಇತಿಹಾಸ ಹೊಂದಿರುವ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾವನ್ನು ತೆರವು ಮಾಡಿರುವುದಕ್ಕೆ ಮುಸ್ಲಿಂ ಮುಖಂಡ ಅಸ್ಪಾಕ್ ಕುಮಟಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಭೈರಿದೇವರಕೊಪ್ಪದ ದರ್ಗಾಕ್ಕೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಸಮುದಾಯದ ಜನರು ಈ ದೇವರಿಗೆ ನಡೆದುಕೊಳ್ಳುತ್ತಿದ್ದರು. ಕಷ್ಟ ಅಂತ ಬಂದಾಗ ಎಲ್ಲರೂ ಈ ದರ್ಗಾಕ್ಕೆ ಹೋಗಿ ಬೇಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಈ ದೇವರು ಕೂಡ ನಂಬಿದ ಭಕ್ತರ ಕೈ ಬಿಟ್ಟಿಲ್ಲ. ಈ ರೀತಿ ದರ್ಗಾ ತೆರವು ಮಾಡಿದ್ದು ಬಹಳ ಸಂಕಟದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications