Gold: ಸಾರಿಗೆ ಬಸ್‌ನಲ್ಲಿ ಬಿಟ್ಟಿದ್ದ ಚಿನ್ನಾಭರಣ, ಹಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೇ ರೋಚಕ: ಸಿಬ್ಬಂದಿಗೆ ಭಾರೀ ಮೆಚ್ಚುಗೆ
ಹುಬ್ಬಳ್ಳಿ, ಸೆಪ್ಟಂಬರ್ 27: ಇಂದಿನ ಕಾಲದಲ್ಲಿ ಹಣ, ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖದೀಯುವವರು ಇದ್ದಾರೆ, ಸಿಕ್ಕಿದ್ದನ್ನು ಮರಳಿ ನೀಡದೇ ತಮ್ಮ ಬಳಿ ಇಟ್ಟುಕೊಂಡವರಿದ್ದಾರೆ. ಆದರೆ ಇಲ್ಲೊಂದು ಅಪರೂಪದ ಪ್ರಕರಣ ನಡೆದಿದೆ. ಚಿನ್ನಾಭರವಣ, ಒಡವೆ ಚೀಲವನ್ನು ಮರಳಿ ತಲುಪಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಇತರರಿಗೂ ಮಾದರಿಯ ನಡೆಯನ್ನು ಈ ಸಾರಿಗೆ ಸಿಬ್ಬಂದಿ ಮೆರೆದಿದ್ದಾರೆ.
ಹೌದು, ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋದ ಒಡವೆ, ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಬ್ಯಾಗನ್ನು ಮರಳಿ ಪ್ರಯಾಣಿಕರಿಗೆ (ವಾರಸುದಾರರಿಗೆ) ಹಿಂತಿರುಗಿಸಲಾಗಿದೆ. ಬಸ್ ಸಿಬ್ಬಂದಿಯ ಈ ಮಾನವೀಯ ಹಾಗೂ ಪ್ರಾಮಾಣಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಬಸ್ ಚಾಲಕ ಕಂ ನಿರ್ವಾಹಕರನ್ನು ಅಭಿನಂದಿಸಿದ ಘಟನೆ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದಿದೆ.

ಪ್ರಯಾಣಿಕರು ಬ್ಯಾಗ್ ಕಳೆದುಕೊಂಡಿದ್ದು ಹೇಗೆ?
ಶಿವಮೊಗ್ಗ ಜಿಲ್ಲೆಯ ಗೋಂದಿ ಚಟ್ನಹಳ್ಳಿ ನಿವಾಸಿ ಸಾವಿತ್ರಮ್ಮ ಎಂಬುವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಗ್ರಾಮಾಂತರ 3ನೇ ಘಟಕದ ಕೆ ಎ 25 ಎಫ್ 3127 ಬಸ್ಸಿನಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದರು.
ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಕೈಯಲ್ಲಿದ್ದ ಬ್ಯಾಗನ್ನು ಬಸ್ಸಿನಲ್ಲಿ ಮರೆತು ಬಂದಿದ್ದಾರೆ. ನಂತರ ಮತ್ತೊಂದು ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಅವರು ಬಸ್‌ನಿಂದ ಇಳಿಯುವ ಚೀಲವನ್ನು ಬಸ್‌ನಲ್ಲಿಯೆ ಬಿಟ್ಟು ಇಳಿದಿದ್ದಾರೆ.
ಈ ವೇಳೆ ಬೇರೆ ಪ್ರಯಾಣಿಕರು ಅನುಮಾನಾಸ್ಪದವಾಗಿ ಈಬ್ಯಾಗ್ ಎತ್ತಿಕೊಳ್ಳುವುದನ್ನು ನೋಡಿದ ಬಸ್ ಕಂ ಡ್ರೈವರ್ ಸಿ.ಎಸ್ ಸಿರಿಯಮ್ಮನವರ ಬ್ಯಾಗ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡು ಪರಿಶೀಲಿಸಿದ್ದಾರೆ. ಕೂಡಲೇ ತಮ್ಮ ಘಟಕದ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿಗೆ ಬ್ಯಾಗ್‌ನಲ್ಲಿ ಕಂಡಿದ್ದೇನು?
ನಂತರ ಬ್ಯಾಗ್‌ನಲ್ಲಿದ್ದ ರೂ.25,000 ನಗದು ಹಣ, ಎರಡು ಜೊತೆ ಬೆಳ್ಳಿಯ ಕಾಲು ಚೈನು, ಎಟಿಎಂ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇರುವುದನ್ನು ಗಮನಿಸಿದ್ದಾರೆ. ಆಧಾರ್ ಕಾರ್ಡ್ ನಲ್ಲಿರುವ ದೂರವಾಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ವಿಭಾಗಿಯ ನಿಯಂತ್ರಣಾಧಿಕಾರಿ, ವಿಭಾಗಿಯ ಸಂಚಾರ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕರ ಸಮಕ್ಷಮದಲ್ಲಿ ನಿರ್ವಾಹಕರ ಮೂಲಕ ಬ್ಯಾಗನ್ನು ವಾರಸುದಾರರಿಗೆ ಮರಳಿ ನೀಡಿದ್ದಾರೆ.
ಇತ್ತ ಬ್ಯಾಗ್ ಎಲ್ಲಿ ಕಳೆದುಕೊಂಡಿದ್ದೇವು ಎಂಬ ನೆನಪು ಸಹ ಇಲ್ಲದೇ ತಡಕಾಡುತ್ತಿದ್ದ ಆ ಪ್ರಯಾಣಿಕರಿಗೆ ಜೀವ ಮರಳಿ ಬಂದಂತಾಗಿದೆ. ಕೂಡಲೇ ದೂರವಾಣಿಗೆ ಬಂದ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಬ್ಯಾಗ್ ಮರಳಿ ಸಿಗುವುದು ಖಾತರಿಯಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದರೆ.
ಬ್ಯಾಗ್ ಪಡೆದ ವಾರಸುದಾರರು ಹೇಳಿದ್ದೇನು?
ನಾವು ಮೂರು ಜನ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದೇವೆ. ಅದರಲ್ಲಿ ಒಬ್ಬರು ಬ್ಯಾಗು ತೆಗೆದುಕೊಂಡು ಇಳಿದಿರಬಹುದು ಎಂದು ತಿಳಿದುಕೊಂಡು ಸುಮ್ಮನಾಗಿದ್ದೆವು. ಸಾರಿಗೆ ಸಿಬ್ಬಂದಿಯಿಂದ ದೂರವಾಣಿ ಕರೆ ಬಂದಾಗ ಬ್ಯಾಗ್ ಬಿಟ್ಟು ಬಂದ ವಿಷಯ ಗೊತ್ತಾಗಿ ಗಾಬರಿಯಾಗಿತ್ತು. ಹಣ ಹಾಗೂ ಒಡವೆ ಎಲ್ಲವು ಸುರಕ್ಷಿತವಾಗಿವೆ. ಬ್ಯಾಗನ್ನು ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ವಾರಸುದಾರರು ಪ್ರತಿಕ್ರಿಯಿಸಿದ್ದಾರೆ.
ಸಿಬ್ಬಂದಿ ಮಾದರಿ ಕಾರ್ಯಕ್ಕೆ ವಿಭಾಗಾಧಿಕಾರಿ ಶ್ಲಾಘನೆ
ಪ್ರಾಮಾಣಿಕತೆ ಮೆರೆದ ಸಿಬ್ಬಂದಿಯನ್ನು ಅಭಿನಂದಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಚಾಲಕ ಕಂ ನಿರ್ವಾಹಕ, ಸಿ.ಎಸ್. ಸಿರಿಯಮ್ಮನವರ ಅವರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗೂ ಇತರೆ ನೌಕರರಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.












Click it and Unblock the Notifications