ಹುಬ್ಬಳ್ಳಿ: 900ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ಭರದ ಸಿದ್ಧತೆ
ಹುಬ್ಬಳ್ಳಿ, ಸೆಪ್ಟೆಂಬರ್ 18: ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ವಿಜೃಂಭಣೆಯಿಂದ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ನಡೆಯುತ್ತದೆ. ಇಲ್ಲಿ ಪ್ರತಿಷ್ಠಾಪಿಸುವ ವಿವಿಧ ಮಾದರಿಯ ಹಾಗೂ ಬೃಹದಾಕಾರದ ವೈವಿಧ್ಯಮಯ ಗಣಪನ ಮೂರ್ತಿಯನ್ನು ನೋಡಲು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಇಲ್ಲಿನ ಕೆಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಏರ್ಪಡಿಸುವ ಬಗೆಬಗೆಯ ಆಕರ್ಷಕ ರೂಪಕಗಳನ್ನು ನೋಡಲು ಇಡೀ ರಾತ್ರಿ ಜನ ಮುಗಿ ಬೀಳುತ್ತಾರೆ.
ಗಣೇಶ ಪ್ರತಿಷ್ಠಾಪನೆಯು ಇಂದು ಸಂಜೆ ಮತ್ತು ನಾಳೆ ನಡೆಯಲಿದೆ. ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ ಇಲ್ಲಿನ ಸ್ಟೇಷನ್ ರಸ್ತೆ, ಬಾನಿ ಓಣಿ, ವಿಶ್ವೇಶ್ವರ ನಗರ, ಜನತಾ ಬಜಾರ್, ಆದರ್ಶ ನಗರ, ದುರ್ಗದ ಬೈಲು, ರಾಧ-ಕೃಷ್ಣ ಗಲ್ಲಿ, ಸಿಂಪಿಗಲ್ಲಿ, ಶೀಲವಂತರ ಓಣಿ, ಅಕ್ಕಿಹೊಂಡ ಹಾಗೂ ಹಳೇ ಹುಬ್ಬಳ್ಳಿ ಸೇರಿದಂತೆ ನಗರದೆಲ್ಲೆಡೆ 900ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಇದರೊಂದಿಗೆ ಹಲವೆಡೆ ವೈವಿಧ್ಯಮಯ ಆಕರ್ಷಕ ಗಣೇಶ ಮೂರ್ತಿಯ ರೂಪಕಗಳ ಅಂತಿಮ ತಯಾರಿಯೂ ನಡೆಯುತ್ತದೆ.

ಮನೆ ಮನೆಗಳಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದರಿಂದ ಮೂರ್ತಿ ತಯಾರಕರು ಪುಟ್ಟ, ಪುಟ್ಟ ಗಣೇಶನನ್ನು ಮೂರ್ತಿ ತಯಾರಿಸಿ, ಅಂತಿಮಸ್ಪರ್ಶ ನೀಡುತ್ತಿದ್ದಾರೆ. ನಗರದ ಶೀಲವಂತರ ಓಣಿ, ಸಿಂಪಿಗಲ್ಲಿ, ಸರಾಫ ಗಟ್ಟಿಯಲ್ಲಿ ಅಂದಾಜು 4 ಅಡಿ ಎತ್ತರದ ಬೆಳ್ಳಿ ಗಣೇಶ ಮೂರ್ತಿ ಪ್ರತಿಪ್ಠಾಪನೆಯ ಸಿದ್ಧತೆಯೂ ನಡೆದಿದೆ.
ಪಾಂಡುರಂಗ ವಿಠ್ಠಲ
ಸ್ಟೇಷನ್ ರಸ್ತೆಯ ಗಣೇಶೋತ್ಸವ ಮಂಡಳಿಯು ಈ ಬಾರಿ ಹರಿಭಕ್ತ ಪುಂಡಲೀಕ ಪಂಡರಾಪುರದ ಪಾಂಡುರಂಗ ವಿಠ್ಠಲನ ರೂಪಕದಲ್ಲಿ ಮೂರ್ತಿಯ ಪ್ರತಿಷ್ಠಾನೆಗೆ ಸಿದ್ಧತೆ ಮಾಡಿಕೊಂಡಿದೆ.
ನಗರದಲ್ಲಿಯೇ ನೆಲೆಸಿರುವ ಕೊಲ್ಕತ್ತ ಮೂಲದ ಮೂರ್ತಿ ತಯಾರಕರಾದ ಅಪ್ಪುಪಾಲ್ ನೇತೃತ್ವದ ತಂಡವು 14 ಅಡಿ ಎತ್ತರದ ಪಾಂಡುರಂಗ ವಿಠ್ಠಲನ ರೂಪಕದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದೆ. ಸೆ.19ರಂದು ಸಂಜೆ 7ಕ್ಕೆ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ ಎಂದು ಸ್ಟೇಷನ್ ರೋಡ್‌ನ ಗಣೇಶೋತ್ಸವ ಮಂಡಳಿಯ ಶ್ರೀನಿವಾಸ್ ತಿಳಿಸಿದ್ದಾರೆ.
ಹಳೇ ಹುಬ್ಬಳ್ಳಿಯ ರಾಧ-ಕೃಷ್ಣಗಲ್ಲಿಯಲ್ಲಿ ಈ ಬಾರಿ ತಿರುಪತಿ ದೇಗುಲದ ಮಾದರಿಯಲ್ಲಿ ವಿಷ್ಣುವಿನ ಅವತಾರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಜನತಾ ಬಜಾರ್‌ನ ಸೂಪರ್ ಮಾರ್ಕೆಟ್‌ನಲ್ಲಿ ತುಳಜಾ ಭವನಿ, ಮರಾಠ ಗಲ್ಲಿ ಸೇರಿದಂತೆ ನಗರದೆಲ್ಲೆಡೆ ವಿವಿಧ ರೂಪಕಗಳ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಸಿದ್ಧತೆ ನಡೆಯುತ್ತಿದೆ.
ಈ ಬಾರಿ ಗಣೇಶ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಲ್ಲಾ ಸಮಿತಿಯವರಿಗೆ ಕೋರಲಾಗಿದೆ ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಶೀಲವಂತರ ಓಣಿಯ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಿತಿಯು ಈಚೆಗೆ ಯಶಸ್ವಿಯಾದ 'ಚಂದ್ರಯಾನ-3' ಯೋಜನೆ ಹಾಗೂ ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ (ರೋವರ್) ಚಲಿಸುತ್ತಿರುವ ರೂಪಕವನ್ನು ಚಿತ್ರಿಸಿ ಅದರೊಳಗೆ ಚಿನ್ನಾಭರಣ ಅಲಂಕಾರದ ಬೆಳ್ಳಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಚಿಂತನೆಯನ್ನು ನಡೆಸಿದೆ. ಇದೊಂದು ಆಕರ್ಷಕ ರೂಪಕವಾಗಲಿದೆ .












Click it and Unblock the Notifications