ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್: 8 ಜನರ ಸ್ಥಿತಿ ಗಂಭೀರ, ಕಿಮ್ಸ್ ವೈದ್ಯರಿಗೆ ಪ್ರಹ್ಲಾದ ಜೋಶಿ ತರಾಟೆ
ಹುಬ್ಬಳ್ಳಿಯಲ್ಲಿ ಸೋಮವಾರ (ಡಿಸೆಂಬರ್ 23)ಕ್ಕೆ ಭಾರೀ ದೊಡ್ಡ ದುರಂತವೊಂದು ಸಂಭವಿಸಿದೆ. ಆದರೆ, ಇಲ್ಲಿನ ಕಿಮ್ಸ್ ವೈದ್ಯರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಿಮ್ಸ್ ವೈದ್ಯರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಮ್ಸ್ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಹುಬ್ಬಳ್ಳಿಯಲ್ಲಿ ಗೃಹ ಬಳಕೆ ಸಿಲಿಂಡರ್ ಸ್ಫೋಟವಾಗಿದ್ದು ದೊಡ್ಡ ದುರಂತವೊಂದು ತಪ್ಪಿದೆ. ಆದರೆ, ಈ ಭಾರೀ ಅನಾಹುತದಲ್ಲಿ 9ಕ್ಕೂ ಹೆಚ್ಚು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಗಂಭೀರ ಗಾಯವಾಗಿದೆ. ಇವರನ್ನು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಆದರೆ, ಇವರಿಗೆ ಚಿಕಿತ್ಸೆ ನೀಡುವಲ್ಲಿ ಲೋಪವಾಗಿದೆ ಎನ್ನುವ ಗಂಭೀರವಾದ ಆರೋಪ ಇದೀಗ ಕೇಳಿ ಬಂದಿದೆ.
ಘಟನೆಯ ಹಿನ್ನೆಲೆ: ಇಲ್ಲಿನ ಹುಬ್ಬಳ್ಳಿಯ ಉಣಕಲ್‌ನ ಅಚ್ಚಮ್ಮ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಕೂಡಲೇ ಗಾಯಗೊಂಡಿದ್ದ ಮಾಲಾಧಾರಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯರಾತ್ರಿ ನಡೆದ ಘಟನೆಯಿಂದ ತಕ್ಷಣ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೆಲವು ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಗ್ಯಾಸ್ ಲೀಕ್ ಹಾಕಿ ದೀಪದಿಂದ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗಾಯಾಳುಗಳನ್ನು ವಿನಾಯಕ, ಪ್ರಕಾಶ, ಶಂಕರ್, ಮಂಜುನಾಥ, ಸಂಜಯ್, ಪ್ರವೀಣ್ ಹಾಗೂ ತೇಜಸ್ ಎನ್ನುವ ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯವಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಮಾತನಾಡಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಕಮ್ಮಾರ ಅವರು, ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿರುವ ಅಯ್ಯಪ್ಪ ಮಾಲಾಧಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 9 ಜನ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರಿಗೆ ಶೇಕಡ 70 ರಿಂದ 90 ರಷ್ಟು ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧ ಅಂಗಾಂಗಗಳು ಇನ್ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಗಾಯಾಳುಗಳಿಗೆ ಎಲ್ಲ ರೀತಿಯ ಚಿಕಿತ್ಸೆ ಮುಂದುವರಿಸಲಾಗಿದೆ ಎಂದಿದ್ದಾರೆ. ಆದರೆ, ಗಾಯಾಳುಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಅಯ್ಯಾಪ್ಪ ಸ್ವಾಮಿ ಮಾಲಧಾರಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಹ್ಲಾದ ಜೋಶಿಗೆ ದೂರು: ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡವರಿಗೆ ಕಿಮ್ಸ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರಲಾಗಿದ್ದು, ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ದೂರು ನೀಡಲಾಗಿದೆ. ರಾತ್ರಿ ಆಸ್ಪತ್ರೆಗೆ ಬಂದಾಗ ನಾವೇ ಔಷಧಿ ಬಾಕ್ಸ್ ಓಪನ್ ಮಾಡಿಕೊಟ್ಟೆವು. 9 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ ಆದರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಈ ವೇಳೆ ಕಿಮ್ಸ್ ನಿರ್ದೇಶಕರನ್ನು ಪ್ರಹ್ಲಾದ ಜೋಶಿ ಅವರು ತರಾಟೆಗೆ ತೆಗೆದುಕೊಂಡರು. ತಪ್ಪಿತಸ್ಥರನ್ನು ಅಮಾನತು ಮಾಡಲು ಸೂಚನೆ ಕೊಟ್ಟರು. ಈ ಸಂಬಂಧ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೂ ಸಹ ಸೂಚನೆ ನೀಡಿದರು.












Click it and Unblock the Notifications