ಹು-ಧಾ ಮೆಯರ್ ಗೆ ಸಿಎಂ ಅವಮಾನ: ಪ್ರತಿಭಟನೆ ಎಚ್ಚರಿಕೆ
ಹುಬ್ಬಳ್ಳಿ, ಜೂನ್ 10: 'ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರಥಮ ಪ್ರಜೆಯಾದ ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನಿಸಿದ್ದಾರೆ' ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೆಯರ್ ಡಿ.ಕೆ.ಚೌವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜೂನ್ 4 ರಂದು ಮುಖ್ಯಮಂತ್ರಿಗಳು ಹುಬ್ಬಳ್ಳಿ ಮೂಲಕ ಗದಗ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ನಗರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರನ್ನು ಸ್ವಾಗತಿಸುವುದು ಮೆಯರ್ ಆದ ನನ್ನ ಕರ್ತವ್ಯ. ಆದ್ದರಿಂದ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನನ್ನನ್ನು ಅವಮಾನ ಮಾಡಿದ್ದಾರೆ.

ನಾನು ಬಿಜೆಪಿಗೆ ಸೇರಿರಬಹುದು ಆದರೆ, ಸಂವಿಧಾನಿಕ ಹುದ್ದೆಯಲ್ಲಿರುವವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವನ್ನು ಸಿದ್ದರಾಮಯ್ಯ ತೋರದಿರುವುದು ತೀವ್ರ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಮತ್ತೆ ಹುಬ್ಬಳ್ಳಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ತೆರಳುತ್ತೇನೆ. ಅವರೇನಾದರೂ ಮತ್ತೆ ಅವಮಾನ ಮಾಡಿದರೆ ಅಲ್ಲಿಯೇ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
110 ಕೋಟಿ ಬಿಡುಗಡೆಗೆ ಆಗ್ರಹ
'ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ ಕಾನೂನು ಬದ್ಧ ಅನುದಾನ ನೀಡಲು ಮುಖ್ಯಮಂತ್ರಿಗಳು ವಿನಾಕಾರಣ ಹಿಂದೇಟು ಹಾಕುತ್ತಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸರ್ಕಾರ ಬಾಕಿ ಉಳಿಸಿಕೊಂಡಿರುವ ಪಾಲಿಕೆ ನಿವೃತ್ತ ನೌಕರರ ಪಿಂಚಣಿ ವೇತನ ಹಾಗೂ ಬಾಕಿ ಉಳಿಸಿಕೊಂಡಿರುವ 110 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇನೆ ಹೊರತು ಅವರ ಬಳಿ ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿಲ್ಲ. ಹಾಗೀದ್ದರೂ ಮೆಯರ್ ಹುದ್ದೆಗಾದರೂ ಗೌರವದಿಂದ ನಡೆದುಕೊಳ್ಳಬೇಕಿತ್ತು. ಆದರೆ ಅದನ್ನು ಬಿಟ್ಟು ಪಕ್ಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿಗೆ ನಿಯೋಗ
ಮಹಾನಗರ ಪಾಲಿಕೆಗೆ ಬರಬೇಕಾದ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯಲು ಕಳೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಅವರ ಬಳಿ ನಿಯೋಗ ತೆಗೆದುಕೊಂಡು ಹೋಗಲಾಗುವುದು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿದರೆ ಸರಿ ಇಲ್ಲವಾದರೆ ವಿಧಾನಸೌಧದ ಎದುರೇ ಪ್ರತಿಭಟನೆ ನಡೆಸಲಾಗುವುದು ಎಂದು ಚೌವ್ಹಾಣ್ ಎಚ್ಚರಿಕೆ ನೀಡಿದರು.












Click it and Unblock the Notifications