ಹುಬ್ಬಳ್ಳಿ: ಸೋರುತಿಹುದು ಹೊಸ ಬಸ್ ನಿಲ್ದಾಣ ಕಟ್ಟಡದ ಮೇಲ್ಛಾವಣಿ, ಪ್ರಯಾಣಿಕರ ಪರದಾಟ
ಹುಬ್ಬಳ್ಳಿ, ಜುಲೈ, 27: ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್‌ನಿಲ್ದಾಣದ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು, ನೆಮ್ಮದಿಯ ನಿದ್ದೆಗೂ ಅವರು ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ.
ಶಿಥಿಲಗೊಂಡಿರುವ ಮೇಲ್ಛಾಣಿಯಿಂದ ಮಳೆ ನೀರು ಸೋರುತ್ತಿದ್ದು, ಪ್ರಯಾಣಿಕರು ಕೊಡೆಗಳನ್ನು ಹಿಡಿದು ಆಸನದಲ್ಲಿ ಕೂರುವಂತಾಗಿದೆ. ಬಸ್ ನಿಲ್ದಾಣದ ಮೇಲ್ಛಾವಣಿ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿದೆ. ಇನ್ನು ನಿಲ್ದಾಣದಲ್ಲಿನ 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿದ್ದು, 12ನೇ ಪ್ಲಾಟ್‌ಫಾರ್ಮ್ ಸಂಪೂರ್ಣ ಜಲಾವೃತವಾಗಿದೆ.

ಪ್ರವೇಶ ದ್ವಾರದ ಬಲಭಾಗದಲ್ಲಿ ಟೆಂಡರ್ ಪಡೆದಿರುವ ಎರಡು ಅಂಗಡಿಗಳಿದ್ದು, ಸೋರುವ ಮಳೆ ನೀರಿನಿಂದ ರಕ್ಷಿಸಿಕೊಳ್ಳಲು, ಮುಂಭಾಗಕ್ಕೆ ಚಾವಣೆ ಹಾಕಿಕೊಂಡಿದ್ದಾರೆ. ಪ್ರಯಾಣಿಕರು ಸೂಟ್‌ಕೇಸ್, ಬ್ಯಾಗ್‌ಗಳನ್ನು ಹೊತ್ತುಕೊಂಡು ಆಯಾ ಪ್ಲಾಟ್‌ಫಾರ್ಮ್‌ಗಳಿಗೆ ನೀರಿನಲ್ಲೇ ದಾಟಿಕೊಂಡು ಹೋಗಬೇಕಾಗಿದ್ದು, ಮಳೆ ನೀರು ಸೋರದಂತೆ ನಿಯಂತ್ರಿಸಲು ಕಟ್ಟಡದ ಕೆಲ ಕಡೆ ಭೀಮ್‌ಗಳಿಗೆ ಶೀಟ್ ಹಾಕಲಾಗಿದೆ. ಸಿಬ್ಬಂದಿ ವಿಶ್ರಾಂತಿಗೃಹದ ಗೋಡೆಗಳು ತೇವಗೊಂಡಿದ್ದು, ಒಂದು ಭಾಗವನ್ನು ಈತ್ತೀಚೆಗಷ್ಟೇ ಸರಿಪಡಿಸಿ ಪ್ಲಾಸ್ಟರ್ ಮಾಡಲಾಗಿದೆ. ಆದರೆ, ಪೂರ್ಣ ಪ್ರಮಾಣದ ಸುವ್ಯವಸ್ಥೆ ಮಾಡಲಾಗಿಲ್ಲ.
ಸರ್ಕಾರದ ಕಟ್ಟಡದ ಬಾಳಿಕೆ ಅವಧಿ ಕನಿಷ್ಠ 60 ವರ್ಷಗಳಾಗಿವೆ. 2000ನೇ ಇಸವಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆಯಾಗಿದೆ. ಅನುದಾನ ಕೊರತೆಯಿಂದ ಬಸ್ ನಿಲ್ದಾಣ ನಿರ್ವಹಣೆ ಕಷ್ಟವಾಗಿದೆ. ಪೈಪ್‌ಗಳಲ್ಲಿ ಕಸ ತುಂಬಿದ್ದು, ಮಳೆ ನೀರು ಹರಿಯುವುದಿಲ್ಲ. ಆದ್ದರಿಂದ ಚಾವಣಿ ಮೇಲೆ ನೀರು ಹರಿಯದೇ ಸೋರುತ್ತದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಹೆದ್ದಾರಿಗೆ ಉರುಳಿದ ಬೃಹತ್ ಗಾತ್ರದ ಮರ
ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಡುವಿಲ್ಲದೆ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಹಾಗೂ ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಕೆಲ ಗಂಟೆಗಳ ಕಾಲ ಸಂಪರ್ಕ ಅಸ್ತವ್ಯಸ್ಥವಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು
ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮರ ತೆರವು ಕಾರ್ಯಾಚರಣೆ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರ ನೆರವಿನಿಂದ ರಸ್ತೆಯಲ್ಲಿ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆದಿದ್ದು, ಧಾರಾಕಾರ ಮಳೆಯ ನಡುವೆಯೂ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕುಸಿದು ಬಿದ್ದ ತಡೆಗೋಡೆ
ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮನೆಯ ಮುಂದೆ ನಿರ್ಮಿಸಿದ್ದ ಬೃಹತ್ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಓಣಿಗಂಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಕಳೆದ ವರ್ಷ ಮನೆಯ ಅಡಿಪಾಯಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಇದೀಗ ಮಳೆ ಹೆಚ್ಚಾದ ಪರಿಣಾಮ ಕುಸಿಯಲು ಆರಂಭಿಸಿದೆ. ಗ್ರಾಮದ ಭಾಸ್ಕರ್ ಡೋಂಗ್ರೆ ಎಂಬುವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ಕ್ಷಣ ಕ್ಷಣಕ್ಕೂ ಕುಸಿವ ಭೀತಿ ಎದುರಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಕ್ರಮಕ್ಕೆ ಮುಂದಾಗಿದ್ದರು.
ಭಾರೀ ಮಳಗೆ ವೃದ್ಧೆ ಬಲಿ
ಧಾರಾಕಾರ ಮಳೆಯಿಂದ ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಹೇಮಾವತಿ ನದಿ ರಭಸವಾಗಿ ಹರಿಯುತ್ತಿದ್ದ ಪರಿಣಾಮ ವೃದ್ಧೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ದಾರದಹಳ್ಳಿ ಗ್ರಾಮದ 61 ವರ್ಷದ ದೇವಮ್ಮ ಮೃತರು ಎಂದು ಗುರುತಿಸಲಾಗಿತ್ತು.
ಗದ್ದೆಗೆ ತೆರಳುವಾಗ ನದಿಗೆ ಕಾಲು ಜಾರಿ ಬಿದಿದ್ದ ವೃದ್ಧೆ, ಧಾರಾಕಾರ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.












Click it and Unblock the Notifications