ಆರ್‌ಎಸ್ಎಸ್‌ನಲ್ಲಿ ಜೀವನ ಆರಂಭಿಸಿದ ಶೆಟ್ಟರ್ ಕಾಂಗ್ರೆಸ್ ಬಂದ ಕೂಡಲೇ ಜಾತ್ಯಾತೀತರಾದ್ರ?-ಓವೈಸಿ
ಧಾರವಾಡ, ಮೇ 03: ಕಾಂಗ್ರೆಸ್‌ನವರು ಚುನಾವಣೆ ಮುಂಚೆ ಬಹಳಷ್ಟು ಮಾತು ಹೇಳುತ್ತಾರೆ. ಆದರೆ, ಚುನಾವಣೆ ನಂತರ ಏನು ಮಾಡ್ತಾರೆ ಅಂತ ನೋಡೋಣ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಪ್ರಸ್ತಾಪ ವಿಚಾರವಾಗಿ ಎಐಎಮ್‌ಐಎಮ್ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿಯೇ ಬಾಬರಿ ಮಸೀದಿ ನಿರ್ಮಿಸುತ್ತೇವೆ ಎಂದು ರೆಜಲ್ಯುಶನ್ ಪಾಸ್ ಮಾಡಿದ್ದರು. ಆದರೆ ಅದನ್ನು ಏನು ಮಾಡಿದ್ರು? ಎಂದು ಪ್ರಶ್ನೆ ಮಾಡಿದರು. ಇನ್ನು, ಜಗದೀಶ್ ಶೆಟ್ಟರ್ ಜೀವನವೇ ಆರ್‌ಎಸ್ಎಸ್‌ನಲ್ಲಿ ಆರಂಭವಾಯಿತು. ಅಂಥವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರಿ. ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡ ಕೂಡಲೇ ಅವರು ಜಾತ್ಯತೀತರಾಗಿ ಬಿಟ್ರಾ? ಕಾಂಗ್ರೆಸ್ ಪಕ್ಷದವರು ಜಾತ್ಯಾತೀತ ಎನ್ನುವ ಪ್ರಮಾಣ ಪತ್ರ ಕೊಡುವ ನೋಟರಿಯವರಾ? ಎಂದು ಲೇವಡಿ ಮಾಡಿದರು.

ಮುಸ್ಲಿಂ ಮತಗಳನ್ನು ವಿಭಿಜಿಸಲು ಬಿಜೆಪಿ ಓವೈಸಿಯನ್ನು ಕರೆಸಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಓವೈಸಿ, ಹಾಗಾದರೆ ರಾಹುಲ್ ಗಾಂಧಿ ಸೋಲಿಗೂ ನಾನೇ ಕಾರಣವಾ? ಕರ್ನಾಟಕದಲ್ಲಿ ಎರಡು ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಒಂದು ಕಡೆ ಅಭ್ಯರ್ಥಿಗೆ ಬೆಂಬಲಿಸಿದ್ದೇವೆ. ನಿಮ್ಮ ಚುನಾವಣೆ ನೀವು ಮಾಡಿ, ನಮ್ಮ ಚುನಾವಣೆ ನಾವು ಮಾಡುತ್ತೇವೆ. ಕುಣಿಯಲು ಬಾರದವರಿಗೆ ನೆಲ ಡೊಂಕು ಅನ್ನುವಂತಾಗಿದೆ. ನಮ್ಮ ಪಕ್ಷದ ತಂತ್ರಗಾರಿಕೆಗೆ ಅನುಗುಣವಾಗಿ ಚುನಾವಣೆ ಮಾಡ್ತೇವೆ. ಯಾರನ್ನೋ ಗೆಲ್ಲಿಸಲು, ಯಾರನ್ನೋ ಸೋಲಿಸಲು ಚುನಾವಣೆ ಮಾಡಲ್ಲ. ನಾವು ಗೆಲ್ಲಲು ಚುನಾವಣೆ ಎದುರಿಸುತ್ತೇವೆ ಎಂದು ಅಸಾಸುದ್ದೀನ್ ಓವೈಸಿ ತಿರುಗೇಟು ನೀಡಿದರು.

ಚುನಾವಣೆ ಬಂದಾಗ ಬೆಲ್ಲದ್ ಅವರಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ನೆನಪಾಗಿದೆ: ವಾಗ್ದಾಳಿ ನಡೆಸಿದ ಚಿಂಚೋರೆ
ಧಾರವಾಡ: ಈಗ ಚುನಾವಣೆ ಬಂದಿದ್ದು, ಅರವಿಂದ ಬೆಲ್ಲದ್ ಅವರಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ನೆನಪಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕಾಗಿ ಹುಟ್ಟಿಕೊಂಡ ಹೋರಾಟ ಸಮಿತಿಯಲ್ಲಿ ನಾನು ಪಕ್ಷಾತೀತವಾಗಿ ಪಾಲ್ಗೊಂಡೆ. ಎಲ್ಲಾ ಕಡೆಗಳಲ್ಲೂ ನಾನು ಪ್ರತ್ಯೇಕ ಮಹಾನಗರ ಪಾಲಿಕೆ ಸಂಬಂಧ ಬ್ಯಾನರ್ ಹಾಕಿಸಿದ್ದೆ ಎಂದರು.
19 ದಿನ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ಕೂಡ ಮಾಡಲಾಗಿತ್ತು. ಆಗ ಎಚ್.ಕೆ.ಪಾಟೀಲ ಒಬ್ಬರೇ ಇದಕ್ಕೆ ಸ್ಪಂದಿಸಿದ್ದರು. ನನ್ನ ಪ್ರಣಾಳಿಕೆಯಲ್ಲೂ ಪ್ರತ್ಯೇಕ ಮಹಾನಗರ ಪಾಲಿಕೆಗೆ ನಾನು ಒತ್ತು ಕೊಟ್ಟಿದ್ದೇನೆ. ಇದು ಬೆಲ್ಲದ ಅವರಿಗೆ ತಡವಾಗಿ ಗೊತ್ತಾಗಿದೆ. ಸೋಲಿನಿ ಭೀತಿಯಲ್ಲಿರುವ ಬೆಲ್ಲದ್ ಈಗ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ನಾನು ಯಾವುದೇ ರಾಜಕಾರಣ ಇಲ್ಲದೇ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಹಕ್ಕು ಮಂಡನೆ ಮಾಡಿದ್ದೆ. ಆಗ ಬೆಲ್ಲದ್ ಅವರು ಅದಕ್ಕೆ ಸ್ಪಂದಿಸಿರಲಿಲ್ಲ. ಮಲಗಿಕೊಂಡಿದ್ದ ಬೆಲ್ಲದ್ ಅವರನ್ನುಈಗ ಯಾರೋ ಎಬ್ಬಿಸಿದ್ದಾರೆ. ಆ ಮೂಲಕ ಅವರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಲ್ಲದ್ ಈ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ಚುನಾವಣೆ ಬಂದಿರುವ ಸಂದರ್ಭದಲ್ಲಿ ಈಗ ಮಾತನಾಡುತ್ತಿದ್ದಾರೆ ಎಂದು ಅರವಿಂದ ಬೆಲ್ಲದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications