ಅಪ್ಪು ಎರಡನೇ ವರ್ಷದ ಪುಣ್ಯಸ್ಮರಣೆ: ಭಾವಚಿತ್ರದ ಮುಂದೆ ಮಟನ್ ಇಟ್ಟು ಅಭಿಮಾನಿಗಳು ಭಾವುಕ
ಹುಬ್ಬಳ್ಳಿ, ಅಕ್ಟೋಬರ್ 29: ಇಂದು ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಜೈ ರಾಜವಂಶ ಅಭಿಮಾನಿಗಳ ಸಂಘದ ವತಿಯಿಂದ, ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಸಾವಜಿ ಮಟನ್ ಎಡೆ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಅಪ್ಪು ಅಭಿಮಾನಿಗಳಿಂದ ನೂರಾರು ಅಭಿಮಾನಿಗಳಿಗೆ ಅಪ್ಪು ನೆನಪಿಗಾಗಿ ಸಸಿಗಳನ್ನು ಹಾಗೂ ಪುನೀತ್ ಭಾವಚಿತ್ರವನ್ನು ವಿತರಣೆ ಮಾಡಿದರು. ಡಾ. ಪುನೀತ್ ರಾಜಕುಮಾರ್ ಅವರು ಇದೇ ಚನ್ನಮ್ಮ ವೃತ್ತದಲ್ಲಿ ಅಭಿಮಾನಿಗಳೇ ನಮ್ಮನೆ ದೇವರು ಎಂದು ಹಾಡಿದ್ದರು.

ಈಗ ಅಪ್ಪು ಅವರಿಲ್ಲ. ಇದೇ ಸ್ಥಳದಲ್ಲಿ ಅವರ ಅಭಿಮಾನಿಗಳಿಂದಲೇ ಅವರ 2ನೇ ಪುಣ್ಯತಿಥಿ ಆಚರಣೆ ಮಾಡುತ್ತಿರುವುದು ದುಃಖದ ಸಂಗತಿ ಎಂದು ಅಭಿಮಾನಿಗಳು ಭಾವುಕರಾದರು.
ಪುನೀತ್ ರಾಜ್‌ಕುಮಾರ್ 2ನೇ ವರ್ಷದ ಪುಣ್ಯತಿಥಿ: ಆಟೋ ಚಾಲಕರಿಂದ ಕನ್ನಡ ಬಾವುಟ ಕಟ್ಟಿ ಆಚರಣೆ
ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯತಿಥಿಯನ್ನು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ನೆರವೇರಿಸಲಾಯಿತು.

ಇಂದು ಅಪ್ಪು ಇಲ್ಲದ ದಿನ ದುಃಖಕರ ಸಂಗತಿಯಾಗಿದ್ದು, ಎಲ್ಲ ಆಟೋ ಚಾಲಕರು ಸೇರಿಕೊಂಡು ಆಟೋಗೆ ಬೃಹತ್ ಕನ್ನಡ ಬಾವುಟ ಹಾಕಿ, ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೇ ಹುಬ್ಬಳ್ಳಿಯ ತೋಳನಕೆರೆಯಲ್ಲಿ ಪುನೀತ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಬೇಕು. ಈ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ ಹಾಗೂ ಪಾಲಿಕೆ ಆಯುಕ್ತರಿಗೆ ಆಟೋ ಚಾಲಕರು ಮನವಿ ಮಾಡಿಕೊಂಡರು.












Click it and Unblock the Notifications