ವಿನಯ್ ಕುಲಕರ್ಣಿ vs ಬಸವರಾಜ ಬೊಮ್ಮಾಯಿ; ಶಿಗ್ಗಾಂವಿ ಲೆಕ್ಕಾಚಾರ ಬದಲು!

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಯಾಗುವ ಯೋಗ ಸಿಕ್ಕಿತ್ತು. ಈ ಬಾರಿ ಚುನಾವಣೆಯಲ್ಲಿಯೂ ಅವರು ಶಿಗ್ಗಾಂವಿಯಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಎದುರಾಳಿ ಯಾರು?.

ಹಾವೇರಿ, ಮಾರ್ಚ್ 21; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಾರು ಎದುರಾಳಿಗಳಾದರೆ ಫಲಿತಾಂಶ ಏನಾಗಲಿದೆ? ಎಂಬ ಲೆಕ್ಕಾಚಾರ ಸಾಗಿದೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಮೇಲೆ ದೇಶದ ಕಣ್ಣಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಲಕರ್ಣಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಬದಲಾಯಿಸಿದೆ.

2018ರ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ 83,868 ಮತಗಳನ್ನು ಪಡೆದು ಕಾಂಗ್ರೆಸ್‌ನ ಸೈಯದ್ ಅಜ್ಜಂಪೀರ್ ಖಾದ್ರಿ (74,603) ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಯಾಗುವ ಯೋಗ ಸಿಕ್ಕಿತ್ತು. ಈ ಬಾರಿ ಚುನಾವಣೆಯಲ್ಲಿಯೂ ಅವರು ಶಿಗ್ಗಾಂವಿಯಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಸೋಲು, ಗೆಲುವು ಯಾರಿಗೆ? ಎಂಬ ಲೆಕ್ಕಾಚಾರ ನಡೆಯುತ್ತಿದೆ.

Vinay Kulkarni VS Basavaraj Bommai Fight At Shiggaon Calculation

ಹಲವು ಕಾಂಗ್ರೆಸ್ ನಾಯಕರನ್ನು ಸೋಲಿಸಬೇಕು ಎಂದು ಬಿಜೆಪಿ ಹೇಗೆ ತಯಾರಿ ನಡೆಸಿದೆಯೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸಹ ಹಲವು ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಇದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂದು ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್ ಹೈಕಮಾಂಡ್ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ತಂತ್ರ ರೂಪಿಸಿದೆ. ವಿನಯ್ ಕುಲಕರ್ಣಿ ಸಹ ಸಿಎಂ ವಿರುದ್ಧ ಕಣಕ್ಕಿಳಿಯಲು ಒಪ್ಪಿಗೆ ನೀಡಿದ್ದಾರೆ.

ಶಿಗ್ಗಾಂವಿ ಲೆಕ್ಕಾಚಾರ ಬದಲು; ಮಾಜಿ ಸಚಿವ ವಿನಯ್ ಕುಲಕರ್ಣಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ. ಶಿಗ್ಗಾವಿ ಕ್ಷೇತ್ರದಲ್ಲಿ ಪಂಚಮಸಾಲಿ ಮತ್ತು ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ. ವಿನಯ್ ಕುಲಕರ್ಣಿ ಕಣಕ್ಕಿಳಿಸಿ, ಕಳೆದ ಬಾರಿ ಸೋತಿದ್ದ ಸೈಯದ್ ಅಜ್ಜಂಪೀರ್ ಖಾದ್ರಿಯೂ ಒಟ್ಟಿಗೆ ಸೇರಿದರೆ ಬಸವರಾಜ ಬೊಮ್ಮಾಯಿ ಸೋಲಿಸಬಹುದು. ಆ ಮೂಲಕ ಹಾಲಿ ಸಿಎಂಗೆ ಸೋಲುಣಿಸಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಬಹುದು ಎಂಬುದು ಕರ್ನಾಟಕ ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ.

Vinay Kulkarni VS Basavaraj Bommai Fight At Shiggaon Calculation

ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹೋರಾಟದಲ್ಲಿ ವಿನಯ್ ಕುಲಕರ್ಣಿ ಮುಂಚೂಣಿಯಲ್ಲಿದ್ದರು. ಅಲ್ಲದೇ ಇದೇ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಜನರು ಬಿಜೆಪಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದಾರೆ. ಇದನ್ನು ಬಳಕೆ ಮಾಡಿಕೊಂಡು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ಕಾಂಗ್ರೆಸ್‌ನ ಚುನಾವಣಾ ತಂತ್ರವಾಗಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ 60 ಸಾವಿರ ಮತಗಳಿವೆ. 50 ಸಾವಿರ ಮುಸ್ಲಿಂ ಮತಗಳಿವೆ. ಉಳಿದಂತೆ 20 ಸಾವಿರ ಎಸ್‌ಸಿ, 17 ಸಾವಿರ ಎಸ್‌ಟಿ, 20 ಸಾವಿರ ಕುರುಬ ಮತಗಳಿವೆ. ವಿನಯ್ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಪಂಚಮಸಾಲಿ ಸಮುದಾಯ ಅತ್ತ ವಾಲುವ ಆತಂಕದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಅಲ್ಲದೇ ಸೈಯದ್ ಅಜ್ಜಂಪೀರ್ ಖಾದ್ರಿ ಅಭ್ಯರ್ಥಿಯಾದರೆ ಮುಸ್ಲಿಂ ಮತಗಳು ಕಾಂಗ್ರೆಸ್‌ ಪಾಲಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಆತಂಕವೇನು?; ವಿನಯ್ ಕುಲಕರ್ಣಿಯನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದರೆ ಸೈಯದ್ ಅಜ್ಜಂಪೀರ್ ಖಾದ್ರಿ ಪರವಾದ ಮತಗಳು ಕೈ ತಪ್ಪುವ ಆತಂಕ ಸಹ ಕಾಂಗ್ರೆಸ್‌ನಲ್ಲಿದೆ. ಅಲ್ಲದೇ ಕಾಂಗ್ರೆಸ್ ಟಿಕೆಟ್‌ ನೀಡದಿದ್ದರೆ ಅವರು ಜೆಡಿಎಸ್‌ ಸೇರಿ ಕಣಕ್ಕಿಳಿಯಬಹುದು ಎಂಬ ಮಾತೂ ಸಹ ಕೇಳಿ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಅಶೋಕ ಬೇವಿನ ಮರದ ಪಡೆದ ಮತಗಳು ಕೇವಲ 1,353. ಕಳೆದ ಚುನಾವಣೆಯಲ್ಲಿ 74,603 ಮತಗಳನ್ನು ಪಡೆದ ಸೈಯದ್ ಅಜ್ಜಂಪೀರ್ ಖಾದ್ರಿ ಪಕ್ಷ ಬಿಟ್ಟರೆ ಅಪಾರವಾದ ನಷ್ಟವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ತಿಳಿದಿದೆ.

ಸೈಯದ್ ಅಜ್ಜಂಪೀರ್ ಖಾದ್ರಿ ಪರವಾಗಿ ಅನುಕಂಪದ ಅಲೆ ಇದೆ. ಕ್ಷೇತ್ರದಲ್ಲಿ ಸತತ ಮೂರು ಬಾರಿ ಅವರು ಬಸವರಾಜ ಬೊಮ್ಮಾಯಿ ಎದುರು ಸೋಲು ಕಂಡಿದ್ದಾರೆ. 2008ರಲ್ಲಿ ಬಸವರಾಜ ಬೊಮ್ಮಾಯಿ ಸೈಯದ್ ಅಜ್ಜಂಪೀರ್ ಖಾದ್ರಿ ಎದುರಾಳಿಗಳಾಗಿದ್ದರು. ಬಸವರಾಜ ಬೊಮ್ಮಾಯಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. 2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದರೂ ಬಿಜೆಪಿಯಲ್ಲೇ ಉಳಿದ ಬೊಮ್ಮಾಯಿ ಮತ್ತೆ ಸೈಯದ್ ಅಜ್ಜಂಪೀರ್ ಖಾದ್ರಿ ವಿರುದ್ಧ ಗೆದ್ದರು. 2018ರಲ್ಲಿ ಮತ್ತೆ ಗೆದ್ದು ರಾಜ್ಯದ ಮುಖ್ಯಮಂತ್ರಿಯಾದರು.

ಬಸವರಾಜ ಬೊಮ್ಮಾಯಿ ಗೆಲುವಿನ ಓಟಕ್ಕೆ ತಡೆ ಹಾಕಲು ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ವಿನಯ್ ಕುಲಕರ್ಣಿಯನ್ನು ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದೆ. ಆದರೆ ಈ ತಂತ್ರವನ್ನು ಪ್ರಯೋಗ ಮಾಡಲಿದೆಯೇ? ಅಥವ ಚಿಂತನೆಯಲ್ಲಿಯೇ ಮುಗಿದು ಹೋಗಲಿದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+