ಸಿಎಂ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್- ಅತೀ ದೊಡ್ಡ ಕದನಕ್ಕೆ ಸಾಕ್ಷಿಯಾಗಲಿದೆ ಶಿಗ್ಗಾವಿ
ಬೆಂಗಳೂರು, ಮಾರ್ಚ್ 17: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇವೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ರೂಪಿಸುತ್ತಿವೆ. ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಭಾರೀ ತಂತ್ರಕ್ಕೆ ಮೊರೆ ಹೋದಿದೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಪ್ರಬಲ ನಾಯಕ ವಿನಯ್ ಕುಲಕರ್ಣಿಯನ್ನು ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ.
ಧಾರವಾಡದ ವಿನಯ್ ಕುಲಕರ್ಣಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೆಚ್ಚಿನ ಶಿಷ್ಯರಾಗಿದ್ದಾರೆ. ಸಿಎಂ ಬೊಮ್ಮಾಯಿ ವಿರುದ್ದ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಲೆಕ್ಕಾಚಾರದ ಪ್ರಕಾರ ವಿನಯ್ ಕುಲಕರ್ಣಿ ಲಿಂಗಾಯತ ಸಮುದಾಯದ ಪಂಚಮಸಾಲಿ ಉಪಜಾತಿಗೆ ಸೇರಿದವರು. ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದ ಸಾದರ ಉಪಜಾತಿ ಸೇರಿದವರು.

ಪಂಚಮಸಾಲಿ ಉಪಪಂಗಡದ ಮತಗಳು ಶಿಗ್ಗಾವಿ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಒಬಿಸಿ ಕೋಟಾದಡಿ ಮೀಸಲಾತಿ ಪಡೆಯಬೇಕೆಂಬ ಪಂಚಮಸಾಲಿಗಳ ಬೇಡಿಕೆಗೆ ಬಿಜೆಪಿ ಸ್ಪಂದಿಸಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ ಸರಣಿ ಘಟನೆಗಳು ಬಿಜೆಪಿಗೆ ಸಂಕಷ್ಟವನ್ನು ತಂದೊಡ್ಡಿದೆ.
ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಉಪಪಂಗಡವು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ. ಪಂಚಮಸಾಲಿ ಹೋರಾಟದಲ್ಲಿ ವಿನಯ್ ಕುಲಕರ್ಣಿ ಸಕ್ರಿಯವಾಗಿ ಭಾಗವಹಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರಿಗೆ ಪಂಚಮಸಾಲಿಗಳು ಮತ ನೀಡಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ.
ಈ ಚರ್ಚೆಗಳನ್ನು ಗುರುತಿಸಿರುವ ಕಾಂಗ್ರೆಸ್ ನಾಯಕರು ವಿನಯ್ ಕುಲಕರ್ಣಿಗೆ ಮಣೆ ಹಾಕಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ವಿನಯ್ ಕುಲಕರ್ಣಿ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಬೊಮ್ಮಾಯಿ ವಿರುದ್ಧ ನಾನು ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ್ದಾರೆ.

ಆದರೆ, ವಿನಯ್ ಕುಲಕರ್ಣಿ ಅವರು ತಮ್ಮ ಮೂಲ ಕ್ಷೇತ್ರವಾದ ಧಾರವಾಡ ಗ್ರಾಮೀಣದಿಂದ ಸ್ಪರ್ಧಿಸಲು ಒಲವು ತೋರಿದ್ದಾರೆ. ಈ ಬಗ್ಗೆ ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತೀವ್ರ ಪೈಪೋಟಿ ನೀಡುವ ಅನೇಕ ನಾಯಕರು ಪಕ್ಷದಲ್ಲಿದ್ದಾರೆ ಎಂದೂ ಕುಲಕರ್ಣಿ ಹೇಳಿದ್ದಾರೆ.
ಮೂರು ಬಾರಿ ಬಿಜೆಪಿಯಿಂದ ಶಿಗ್ಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಜ್ಜಂ ಪೀರ್ ಖಾದ್ರಿ ಅವರನ್ನು 9 ಸಾವಿರ ಮತಗಳಿಂದ ಸೋಲಿಸಿದ್ದರು. ಅವರು 74,000 ಮತಗಳನ್ನು ಗಳಿಸಿದ್ದರು. ಸಿಎಂ ಬೊಮ್ಮಾಯಿ 83,000 ಮತಗಳನ್ನು ಪಡೆದು ವಿಜಯಿಯಾಗಿದ್ದರು.
ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಿದರೆ ಲಿಂಗಾಯತ ಮತಬ್ಯಾಂಕ್ ಒಡೆಯುವುದು ಖಚಿತ. ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಿಂದ ತನ್ನ ಅಭ್ಯರ್ಥಿ ಗೆಲ್ಲಬಹುದು ಎಂದು ಕಾಂಗ್ರೆಸ್ ಭಾವಿಸಿದೆ. ಈ ಸ್ಪರ್ಧೆಯಿಂದ ಬೊಮ್ಮಾಯಿ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸುವುದು ಅನಿವಾರ್ಯತೆ ಬಂದೊದಗುತ್ತದೆ. ಇದು ಅವರ ರಾಜ್ಯಾದ್ಯಂತ ಪ್ರಚಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಿನಯ್ ರಾಜಶೇಖರಪ್ಪ ಕುಲಕರ್ಣಿ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು. ಅವರು ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಲಿಂಗಾಯರ ಸಮುದಾಯದ ಬಲಿಷ್ಠ ನಾಯಕರೂ ಹೌದು. ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಅವರು ಪ್ರಸ್ತುತ, ಜಾಮೀನಿನ ಮೇಲೆ ಹೊರಗಿದ್ದಾರೆ.












Click it and Unblock the Notifications