ಲೋಕಸಭೆ ಚುನಾವಣೆ: ಹಾಸನದಿಂದಲೇ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಸಜ್ಜು!
ಹಾಸನ, ಡಿಸೆಂಬರ್ 24: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ, ಎಚ್ ಡಿ ರೇವಣ್ಣ ಪುತ್ರ, ಜೆಡಿಎಸ್ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಹಾಸನದಿಂದಲೇ ಲೋಕಸಭೆ ಚುನಾವಣೆ ಸ್ಪರ್ಧಿಸಲು ಇಚ್ಛಿಸಿರುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೆ ನಿರಾಶರಾಗಿದ್ದ ಪ್ರಜ್ವಲ್ರೇವಣ್ಣ ಮುಂದಿನ ಲೋಕಸಭೆ ಚುನಾವಣೆಗಾಗಿ ಸರ್ವ ರೀತಿಯಲ್ಲಿ ಪಕ್ಷ ಸಂಘಟನೆಗೆ ಸಜ್ಜಾಗುತ್ತಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಜೆಡಿಎಸ್ ತನ್ನ ರಣತಂತ್ರ ರೂಪಿಸತೊಡಗಿದೆ. ಜನವರಿ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ನಡೆಸಲು ಮುಂದಾಗಿದೆ.
ಪ್ರಜ್ವಲ್ರೇವಣ್ಣ ಜಿಲ್ಲೆಯಲ್ಲಿ ಗೌಪ್ಯವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಜ್ವಲ್ ನಾಯಕರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ.
ನಾನು ರಾಜಕೀಯದಲ್ಲಿ ಕಲಿಯುವುದು ಸಾಕಷ್ಟಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಎಂದಿಗೂ ಬದ್ಧ. ಒಂದು ವೇಳೆ ಟಿಕೆಟ್ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಸ್ಪರ್ಧಿಸಲು ನಾನು ಸಿದ್ಧ. ಅಥವಾ ದೇವೇಗೌಡರು ಹಾಸನದಿಂದ ಲೋಕಸಭೆಗೆ ಸ್ಫರ್ಧಿಸಿದರೆ ನಾನೇ ಚುನಾವಣಾ ಸಾರಥ್ಯ ವಹಿಸುತ್ತೇನೆ' ಎಂದಿದ್ದಾರೆ.

ವಿಧಾನಸಭೆಗೆ ಸ್ಪರ್ಧಿಸಲು ಮುಂದಾಗಿದ್ದರು
ಪ್ರಜ್ವಲ್ ಅವರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮೊದಲಿಗೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎಂಬ ಸುದ್ದಿ ಬಂತು. ಜತೆಗೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೂಡಾ ಕಾರ್ಯಕರ್ತರಿಂದ ಮನವಿ ಬಂದಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರಜ್ವಲ್ ಅವರು ಅಸೆಂಬ್ಲಿ ಬದಲಿಗೆ ಲೋಕಸಭೆಗೆ ಸ್ಪರ್ಧಿಸುವುದು ಸೂಕ್ತ ಎಂದು ನಿರ್ಧರಿಸಿಬಿಟ್ಟಿದ್ದರು.

ಮೈತ್ರಿಯಿಂದ ಲಾಭ ಪಡೆಯುವ ಸಾಧ್ಯತೆ
ಸಂಸತ್ತಿನಲ್ಲಿ ಕೇವಲ ಒಂದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರದ ಲಾಭ ಪಡೆದು, ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ, ಹಳೆ ಮೈಸೂರು ವಿಭಾಗದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದನ್ನು ಮುಂದಿಟ್ಟುಕೊಂಡು ಹೀಗೊಂದು ಬೇಡಿಕೆ ಮುಂದಿಡಲಾಗಿದೆ. ಮೈಸೂರು ಭಾಗದಿಂದ ಮಂಡ್ಯ ಅಥವಾ ಮೈಸೂರಿನಲ್ಲಿ ಪ್ರಜ್ವಲ್ ಸ್ಪರ್ಧಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಸೂಚಿಸುವ ಸಾಧ್ಯತೆ ಹೆಚ್ಚಿದೆ.

ಸೀಟು ಹಂಚಿಕೆ ಬಗ್ಗೆ ಚರ್ಚೆ
ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಅಸೆಂಬ್ಲಿ ಸ್ಥಾನಗಳ ಪೈಕಿ ಜೆಡಿಎಸ್ 3, ಬಿಜೆಪಿ 4 ಮತ್ತು ಕಾಂಗ್ರೆಸ್ 1ಸ್ಥಾನದಲ್ಲಿ ಗೆದ್ದಿದೆ. ಖುದ್ದು ಸಿದ್ದರಾಮಯಯ್ಯನವರೇ ಇಲ್ಲಿಂದ ಸೋತಿರುವುದು ಮತ್ತು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಗೆದ್ದಿರುವುದರಿಂದ, ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ನವರು ಕೇಳಿದರೆ, ಕಾಂಗ್ರೆಸ್ ಗೆ ಇಲ್ಲ ಎನ್ನಲು ಕಾರಣಗಳಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮೈತ್ರಿ ಲಾಭ ಎರಡು ಪಕ್ಷಕ್ಕೂ ಆಗಲಿದೆ.

ದೇವೇಗೌಡರು ಬಯಸಿದ ಕ್ಷೇತ್ರದಿಂದ ಸ್ಪರ್ಧೆ
ಹಾಸನದಲ್ಲಿ ತಂದೆಗೆ ಬಲಗೈ ಎಂದರೆ ನನ್ನ ತಾಯಿ. ಅವರಿಗೆ ಚುನಾವಣೆ ಸ್ಪರ್ಧೆ ಆಸೆ ಇರಬಹುದು. ಅದನ್ನೇ ಅವರನ್ನೇ ಕೇಳಿ. ಬೆಂಗಳೂರು ಗ್ರಾಮಾಂತರ, ಮಂಡ್ಯ ಟಿಕೆಟ್ ಗಾಗಿ ಭವಾನಿ ರೇವಣ್ಣ ಅವರು ಹೋರಾಟ ಮಾಡಿದ್ದರೂ ಎಂಬುದು ಸುಳ್ಳು. ನಮ್ಮ ಕುಟುಂಬದಲ್ಲಿ ಟಿಕೆಟ್ ಗಾಗಿ ಎಂದೂ ಕಿತ್ತಾಟ ನಡೆದಿಲ್ಲ. ದೇವೇಗೌಡರ ಮಾತಿನಂತೆ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು, ಕೆಲ ವರ್ಷಗಳ ನಂತರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಕಲಿತಿದ್ದೇನೆ. ಅವರು ಬಯಸಿದ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತೇನೆ.












Click it and Unblock the Notifications