Breaking; ಸೂರಜ್ ರೇವಣ್ಣಗೆ ಬಿಗಿ ರಿಲೀಫ್ ಕೊಟ್ಟ ಹೈಕೋರ್ಟ್
ಹಾಸನ, ಡಿಸೆಂಬರ್ 06; ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಡಾ. ಸೂರಜ್ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ಬಿಗಿ ರಿಲೀಫ್ ಕೊಟ್ಟಿದೆ. ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ಕಣಕ್ಕಿಳಿದಿದ್ದಾರೆ.
ಡಾ. ಸೂರಜ್ ರೇವಣ್ಣ ನಾಮಪತ್ರ ತಿರಸ್ಕಾರ ಮಾಡಬೇಕು, ವಿಧಾನ ಪರಿಷತ್ ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಜಾಗೊಳಿಸಲಾಗಿದೆ. ಸೋಮವಾರ ಈ ಕುರಿತು ಕೋರ್ಟ್ ಆದೇಶ ನೀಡಿದೆ.
ಕುಂದೂರು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಕೆ. ಎಲ್. ಡಾ. ಸೂರಜ್ ರೇವಣ್ಣ ವಿರುದ್ಧ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈಗ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಅರ್ಜಿಯಲ್ಲಿ ಮನವಿ ಏನು?; ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಡಾ. ಸೂರಜ್ ರೇವಣ್ಣ ಸುಳ್ಳು ದಾಖಲೆಯನ್ನು ನೀಡಿದ್ದಾರೆ. ನಾಮಪತ್ರದಲ್ಲಿ ಮದುವೆಯ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಕಾನೂನಿನ ಪ್ರಕಾರ ಮದುವೆ ವಿಚಾರ ಉಲ್ಲೇಖಿಸಬೇಕು.
ಮದುವೆ ಆಗಿದ್ದರೆ ಆಗಿದೆ ಎಂದು, ಇಲ್ಲವಾದರೆ ಆಗಿಲ್ಲ ಎಂದು ನಮೂದು ಮಾಡಬೇಕು. ಆದರೆ ಮದುವೆ ಆಗಿದ್ದರೂ ಸಹ ಡಾ. ಸೂರಜ್ ರೇವಣ್ಣ ಆ ವಿಚಾರ ಮುಚ್ಚಿಟ್ಟಿದ್ದಾರೆ. ಪತ್ನಿಯ ಚರ, ಸ್ಥಿರ ಆಸ್ತಿಯನ್ನು ಉಲ್ಲೇಖಿಸಬೇಕಿತ್ತು. ಆದ್ದರಿಂದ ನಾಮಪತ್ರವನ್ನು ತಿರಸ್ಕಾರ ಮಾಡಬೇಕು ಎಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಸರಿಯಲ್ಲ. ತಕರಾರು ಇದ್ದರೆ ಚುನಾವಣೆ ಮುಗಿದ ಬಳಿಕ ತರಕಾರು ಅರ್ಜಿಯನ್ನು ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ವಜಾಗೊಳಿಸಿತು.
ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ವಿಶ್ವನಾಥ್ ಮತ್ತು ಕಾಂಗ್ರೆಸ್‌ನಿಂದ ಎಂ. ಶಂಕರ್ ಅಭ್ಯರ್ಥಿಗಳು.
ಡಾ. ಸೂರಜ್ ರೇವಣ್ಣ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮೊಮ್ಮಗ. ಮೊದಲ ಬಾರಿಗೆ ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರೆ.
ಸೂರಜ್ ರೇವಣ್ಣ ಸ್ಪರ್ಧೆ ಬಗ್ಗೆ ಚರ್ಚೆ; ಡಾ. ಸೂರಜ್ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಂತೆಯೇ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಗಳು ಆರಂಭವಾಯಿತು. ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಪ್ರತಿಪಕ್ಷಗಳು ಟೀಕೆ ನಡೆಸಿದ್ದವು.
ಎಚ್. ಡಿ. ರೇವಣ್ಣ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. "ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಒತ್ತಾಯದ ಮೇರೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್. ಸೂರಜ್ ಕಣಕ್ಕಿಳಿಸಲಾಗಿದೆ" ಎಂದು ಹೇಳಿದ್ದರು.












Click it and Unblock the Notifications