ಸಾವಿನೊಂದಿಗೆ ರಾಜಕೀಯ ಮಾಡಲ್ಲ, ಪ್ರಶಾಂತ್ ಸಾವು ನೋವು ತಂದಿದೆ : ಪ್ರೀತಂ ಗೌಡ
ಹಾಸನ, ಜೂನ್ 3 : "ನಾನು ಎಂದಿಗೂ ಸಹ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಗರಸಭೆ ಸದಸ್ಯ ಪ್ರಶಾಂತ್ ನನ್ನ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಸಾವು ನನಗೂ ನೋವು ತಂದಿದೆ" ಎಂದು ಹಾಸನ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, "ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಅವರ ಹತ್ಯೆ ದುರದೃಷ್ಟಕರ ಹಾಗೂ ದುಃಖದ ಸಂಗತಿ. ಹತ್ಯೆಗಿಡಾದ ಸದಸ್ಯ ಪ್ರಶಾಂತ್ ಅವರು ನನ್ನೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರೂ, ಇತ್ತೀಚೆಗೆ ಅವರ ವಾರ್ಡ್‍ನಲ್ಲಿ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ನಮ್ಮೊಂದಿಗೆ ಓಡಾಡಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಮನೆಗೆ ತೆರಳುತ್ತೇನೆ" ಎಂದರು.
"ಪ್ರಕರಣ ಸಂಬಂಧ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು, ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಪ್ರಕರಣ ಸಂಬಂಧ ರಾಜ್ಯ ಗೃಹ ಮಂತ್ರಿ, ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಶಾಂತ್‌ಗೆ ಬಿಜೆಪಿ ಪಕ್ಷದಿಂದ ಆಹ್ವಾನ ನೀಡಲಾಗಿತ್ತು" ಎಂದು ಒಪ್ಪಿಕೊಂಡಿದ್ದಾರೆ.

ಬಿಜೆಪಿಗೆ ಆಹ್ವಾನಿಸಿದ್ದೆ
ಪ್ರಶಾಂತ್ ಸಾವಿನ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಜೆಡಿಎಸ್ ನಾಯಕರು ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಶಾಸಕ ಪ್ರೀತಂ ಗೌಡ, "ಬಿಜೆಪಿ ಶಾಸಕನಾಗಿ ಪಕ್ಷ ಬಲವರ್ಧನೆಗೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಆಹ್ವಾನಿಸಿದ್ದೇನೆ. ಯಾರಿಗೂ ಸಹ ರಾಜಕೀಯ ನಿಂತ ನೀರಲ್ಲ ಪಕ್ಷಾಂತರ ಮಾಡುತ್ತಲೇ ಇರುತ್ತಾರೆ . ನಾನು ನನ್ನ ವಿರುದ್ಧ ಸೋತಿದವರನ್ನು ಹೊರತು ಪಡಿಸಿ ಎಲ್ಲರನ್ನು ಪಕ್ಷಕ್ಕೆ ಆಹ್ವಾನಿಸುತ್ತೇನೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದ್ದು ತನಿಖೆಯ ನಂತರ ಫಲಿತಾಂಶ ನಿಮಗೇ ತಿಳಿಯಲಿದೆ" ಎಂದರು.

ಪೊಲೀಸರನ್ನು ಶ್ಲಾಘಿಸಬೇಕು
"ಹಾಸನ ನಗರದಲ್ಲಿ ವಿರೋಧ ಪಕ್ಷದ ಹಾವಳಿ ಹೆಚ್ಚಾಗಿದೆ ಅವರು ಸಮಾಧಾನವಾಗಿ ಇದ್ದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ, ನಗರದಲ್ಲಿ ಪೊಲೀಸ್ ಅಧಿಕಾರಿಗಳ ಕಾನೂನು ಪಾಲನೆ ಸರಿಯಾಗಿದೆ. ಪ್ರಶಾಂತ್ ಅವರ ಅಂತ್ಯಕ್ರಿಯೆ ನಡೆಯುವವರೆಗೂ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಎಸ್‌ಪಿ ಶ್ರೀನಿವಾಸ ಗೌಡ ಹಾಗೂ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರ ಪರವಾಗಿ ಶ್ಲಾಘಿಸುತ್ತೇನೆ. ಸಂದರ್ಭ ನಿಭಾಯಿಸಲು ಸರ್ಕಲ್ ಇನ್ಸ್‍ಪೆಕ್ಟರ್ ಅವರನ್ನು ರಜೆ ಮೇಲೆ ತೆರಳಲು ಹೇಳಿರಬಹುದು. ಆದರೆ ಅದು ಅಧಿಕೃತವಿದ್ದರೆ ದಾಖಲೆ ಕೊಡಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಅವರು ಅಧಿಕಾರಿಯಾಗಿ ಉದ್ರಿಕ್ತ ಸ್ಥಿತಿ ನಿಭಾಯಿಸಲು ಏನೇನು ಮಾಡಬೇಕು? ಅದನ್ನು ಎಸ್‌ಪಿ ಮಾಡಿದ್ದಾರೆ" ಎಂದು ಪ್ರೀತಂ ಗೌಡ ಹೇಳಿದ್ದಾರೆ.

ನ್ಯಾಯಕೊಡಿಸುವಂತೆ ಐಜಿಪಿಗೆ ಮನವಿ
"ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣ ಸಂಬಂಧ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಸನಕ್ಕೆ ಭೇಟಿ ನೀಡಿದ್ದಾರೆ. ಹಾಸನಕ್ಕೆ ಐಜಿಪಿ ಆಗಮನ ಹಿನ್ನೆಲೆ, ಪ್ರಶಾಂತ್ ಕುಟುಂಬಸ್ಥರು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಆಗ್ರಹ ಮಾಡಿದರು.
ನಂತರ ಮಾತನಾಡಿ, ಕೊಲೆ ಸಂಬಂಧ ತನಿಖೆ ನಿಷ್ಪಕ್ಷಪಾತವಾಗಿರಬೇಕೆಂದು ಹೇಳಿದ್ದೇನೆ. ಸೈಂಟಿಫಿಕ್ ಹಾಗೂ ಟೆಕ್ನಿಕಲ್ ಸಾಕ್ಷಿ ಸಂಗ್ರಹಿಸಿ ಆರೋಪಿಗಳನ್ನು ದಸ್ತಗಿರಿ ಮಾಡುವಂತೆ ವಿವರವಾದ ಸೂಚನೆ ಕೊಟ್ಟಿದ್ದೇನೆ" ಎಂದು ಶಾಸಕರು.

ನಿಷ್ಪಕ್ಷಪಾತವಾಗಿ ತನಿಖೆ
ತನಿಖೆ ಬಗ್ಗೆ ಮಾತನಾಡಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್, "ಆರೋಪಿಗಳ ಬಗ್ಗೆ ಮಾಹಿತಿಯಿದೆ, ನಮ್ಮ ಮೂರು ತಂಡ ದಸ್ತಗಿರಿ ಮಾಡಲು ಹೋಗಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸುತ್ತಾರೆಂಬ ವಿಶ್ವಾಸ ನನಗಿದೆ. ಸರಿಯಾಗಿ ತನಿಖೆ ಮಾಡಿ ಚಾರ್ಜ್‌ಶೀಟ್ ಹಾಕಲಾಗುವುದು. ಆರೋಪಿಗಳನ್ನು ಬಂಧಿಸಲು ಪೊಲೀಸರ ಮೂರು ತಂಡ ರಚಿಸಲಾಗಿದೆ. ನಾವು 360 ಆ್ಯಂಗಲ್‌ನಲ್ಲಿ ತನಿಖೆ ಮಾಡುತ್ತಿದ್ದೇವೆ. ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂದು ಎಸ್‌ಪಿ, ಸಿಪಿಐ ರೇಣುಕಾಪ್ರಸಾದ್ ಅವರನ್ನು ರಜೆ ಮೇಲೆ ಕಳುಹಿಸಿದ್ದಾರೆ. ಹಾಸನ ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ" ಎಂದರು.












Click it and Unblock the Notifications