ಮಹಾಮಸ್ತಕಾಭಿಷೇಕ ಯಶಸ್ಸು, ರೋಹಿಣಿಗೆ ಧನ್ಯವಾದ: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ
ಹಾಸನ ಸೆಪ್ಟೆಂಬರ್ 11: ಶ್ರವಣಬೆಳಗೊಳದಲ್ಲಿ 2018ರ ಫೆಬ್ರವರಿ 7 ರಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ನಿಗಧಿತ ದಿನಾಂಕಗಳಂದು ಜರುಗಿದ ಮಹಾಮಸ್ತಕಾಭಿಷೇಕ ಮಹೋತ್ಸವವು ವಿಶ್ವದಲ್ಲೇ ಬಹುದೊಡ್ಡ ಕಾರ್ಯಕ್ರಮವಾಗಿ ಯಶಸ್ವಿಗೊಂಡಿದೆ.
ಮಹೋತ್ಸವದ ಯಶಸ್ವಿಗೆ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶ್ರಮಿಸಿದ್ದಾರೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಸ್ಮರಿಸಿದರು.
ಜೈನಕಾಶಿ ಶ್ರವಣಬೆಳಗೊಳದ ಕಾನಜಿ ಯಾತ್ರಿಕಾಶ್ರಮದಲ್ಲಿ ನಡೆದ ಜಿಲ್ಲಾ ಅಧಿಕಾರಿಗಳ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಹಾಮಸ್ತಕಾಭಿಷೆಕ ಮಹೋತ್ಸವದ ಸಂದರ್ಭದಲ್ಲಿ ಶ್ರಮಿಸಿದವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು,

ಧರ್ಮಸ್ಥಳ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ, ಕೇಂದ್ರ ಸರ್ಕಾರ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು, ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಎ.ಮಂಜು ಅವರು ಎಲ್ಲರೂ ಒಂದಾಗಿ ಸಹಕಾರ ನೀಡಿದ್ದು, ವಿಂಧ್ಯಗಿರಿ ಬೆಟ್ಟಕ್ಕೆ ಹೊಸ ಮೆಟ್ಟಿಲುಗಳು ಮತ್ತು ಸುತ್ತಲೂ ಬೇಲಿ ನಿರ್ಮಾಣ ಸೇರಿದಂತೆ ಹಲವು ಶಾಶ್ವತ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ವಸತಿ ನಿರ್ವಹಣೆ ಸಿಬ್ಬಂದಿಗಳನ್ನು ನೆನೆದು ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಅಲ್ಲದೇ, 81ನೇ ಸಾಹಿತ್ಯ ಸಮ್ಮೇಳನ ಬೇರೆ ಎಲ್ಲಾ ಸಮ್ಮೇಳನಕ್ಕಿಂತ ಅದ್ದೂರಿಯಾಗಿ ನಡೆದಿದೆ ಎಂದು ನೆನೆಸಿಕೊಂಡರು.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದ ಕೊನೆಯ ಹಂತ ತಲುಪಿದ್ದು ಸರ್ಕಾರದ ವತಿಯಿಂದ ಕಾಮಗಾರಿಗಳು 1 ವರ್ಷದ ಹಿಂದೆಯಿಂದ ಆರಂಭಗೊಂಡರೆ, ಮಠದ ವತಿಯಿಂದ 3 ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು, ಇದಕ್ಕೆ ಶ್ರೀಗಳು ಹಲವಾರು ಕಮಿಟಿಗಳನ್ನು ರಚಿಸಿ, ತಮ್ಮ ಆರೋಗ್ಯವನ್ನು ಆಲೋಚಿಸದೆ ಮಹಾಮಸ್ತಕಾಭಿಷೇಕ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದ ಶ್ರೀಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮತ್ತು ಹಾಸನ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಕ್ಷೇತ್ರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಠ್ರೀಯ ಅಧ್ಯಕ್ಷೆ ಸರಿತಾ ಎಂ.ಕೆ ಜೈನ್, ಕಾರ್ಯಾಧ್ಯಕ್ಷ ಎಸ್. ಜಿತೇಂದ್ರಕುಮಾರ್, ಮಹಾಮಸ್ತಕಾಬೀಷೇಕ ಮಹೋತ್ಸವ ವಿಶೇಷಾಧಿಕಾರಿ ವರಪ್ರಸಾದ ರೆಡ್ಡಿ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೂ ಹಾಜರಿದ್ದರು.












Click it and Unblock the Notifications