ಯಡಿಯೂರಪ್ಪ ಭೇಟಿ ಬಗ್ಗೆ ಹಾಸನ ಜೆಡಿಎಸ್ ಅಧ್ಯಕ್ಷ ಲಿಂಗೇಶ್ ಹೇಳಿದ್ದೇನು?
ಬೇಲೂರು (ಹಾಸನ), ಆಗಸ್ಟ್ 6: "ನಾನು ಸ್ವಾಮೀಜಿ ಜತೆಗೆ ಅಭಿನಂದನೆ ಸಲ್ಲಿಸಲು ತೆರಳಿದ್ದೆ. ಅದರ ಹೊರತಾಗಿ ನನ್ನ ಕ್ಷೇತ್ರ ಬೇಲೂರಿಗೆ ಅನುಕೂಲ ಆಗುವಂಥ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿಕೊಂಡೆ, ಅಷ್ಟೇ." ಎಂದು ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಎಸ್. ಲಿಂಗೇಶ್ ಮಂಗಳವಾರ ಹೇಳಿದ್ದಾರೆ.
ಜೆಡಿಎಸ್ ಜಿಲ್ಲಾ ಅಧ್ಯಕ್ಷರೂ ಆಗಿರುವ ಲಿಂಗೇಶ್, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಭಿನಂದನೆ ಸಲ್ಲಿಸಲು ತೆರಳಿದ್ದೆ ಎಂದು ತಿಳಿಸಿದ್ದಾರೆ.
ಈ ಹಿಂದಿನ ಮೈತ್ರಿ ಸರಕಾರವು ಯಗಚಿಯಿಂದ ಹಳೇಬೀಡು ಕೆರೆ ತುಂಬಿಸುವ ಯೋಜನೆಗೆ ನೂರಾ ಎಪ್ಪತ್ತು ಕೋಟಿ ಮಂಜೂರು ಮಾಡಿತ್ತು. ಅದರಲ್ಲಿ ನೂರು ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಬಾಕಿ ಹಣ ಬಿಡುಗಡೆ ಮಾಡಿ, ಈ ಕೆಲಸ ಪೂರ್ಣ ಆಗುವುದಕ್ಕೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆವರಲ್ಲಿ ಮನವಿ ಮಾಡಿಕೊಂಡೆ ಎಂದು ಲಿಂಗೇಶ್ ಹೇಳಿದ್ದಾರೆ.

ನನ್ನ ತಂದೆಯವರು ಜನತಾ ದಳದ ಸದಸ್ಯರು. ನಾನೂ ಜೆಡಿಎಸ್ ನಲ್ಲೇ ಮುಂದುವರಿಯುತ್ತೇನೆ ಹೊರತು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ಬುಧವಾರ ಕಾರ್ಯಕರ್ತರ ಸಮಾವೇಶವು ನಡೆಯಲಿದೆ. ಪಕ್ಷ ಬಲಪಡಿಸುವ ಉದ್ದೇಶದಿಂದ ಸಮಾವೇಶದ ಬೆನ್ನಿಗೆ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications