'ಹಾಸನದ ಕೆರೆಗಳಿಗೆ ನೀರು ತುಂಬಲು 330 ಕೋಟಿ ರು ಯೋಜನೆ'
ಹಾಸನ, ಅಕ್ಟೋಬರ್ 25: ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳಿಗೆ 195 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಘೋಷಿಸಿದ್ದಾರೆ.
ಇದೇ ರೀತಿ 330 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದುದ್ದ, ಶಾಂತಿಗ್ರಾಮ, ಹಳೇಕೋಟೆ ಭಾಗದ ಕೆರೆಗಳ ತುಂಬುವ ಕೆಲಸವೂ ಚಾಲನೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಅರಕಲಗೂಡು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಲವು ನೀರಾವರಿ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ನೆರವು: ಭೂ ದಾಖಲೆಗಳು ಸರಿಯಿಲ್ಲದೆ ಗ್ರಾಮೀಣ ಪ್ರದೇಶದ ಜನರು ಪರದಾಡುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ರವರು ತಿಳಿಸಿದರು.

ಭೂಮಾಪನ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ - ಮಾರೇನಹಳ್ಳಿ ಏರ್ಪಡಿಸಿದ್ದ ದರಖಾಸ್ತು ಪೋಡಿ ಆಂದೋಲನ ಉದ್ಘಾಟಿಸಿ ಮಾತನಾಡಿದ ಸಚಿವರು, ಭೂ ದಾಖಲೆಗಳ ಸಮಸ್ಯೆ ಮುಕ್ತಗೊಳಿಸಲು ಸರ್ಕಾರದಿಂದ ಈ ಆಂದೋಲನಕ್ಕೆ ವಿಶೇಷ ಆದೇಶ ಹೊರಡಿಸಲಾಗಿದ್ದು, ಶೀಘ್ರದಲ್ಲೇ ಹಾಸನ ಜಿಲ್ಲೆ ಪೋಡಿ ತೊಂದರೆಗಳಿಂದ ಮುಕ್ತಗೊಳ್ಳಲಿದೆ ಎಂದರು.
ಬೆಲೆ ಕುಸಿತದ ಹಿನ್ನಲೆಯಲ್ಲಿ ಸರ್ಕಾರದಿಂದಲೇ ಬೆಂಬಲ ಬೆಲೆಯೊಂದಿಗೆ ಜೋಳ ಖರೀದಿಸಬೇಕಿದೆ. ಡೈರಿ ಮೂಲಕ ಇದನ್ನು ನೇರವಾಗಿ ಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದ ಸಚಿವರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ತಮ್ಮ ಆಧ್ಯತೆಯಾಗಿದ್ದು, ಅದಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿಗಳಾದ ಡಾ.ಎಚ್.ಎಲ್ ನಾಗರಾಜ್ ರವರು ಮಾತನಾಡಿ ವಿವಾದ ಮುಕ್ತ, ದೋಷ ಮುಕ್ತ, ಪಹಣಿ ನೀಡಲು ಈ ಆಂದೋಲನ ಜಾರಿಗೆ ತರಲಾಗಿದೆ. ಜನ ಸಾಮಾನ್ಯರು ಪ್ರತಿನಿತ್ಯ ಕಂದಾಯ ಇಲಾಖೆ ಕಚೇರಿಗಳಿಗೆ ಅಲೆದಾಡುತ್ತಿರುವುದನ್ನು ಗಮನಿಸಿ ಜಿಲ್ಲಾ ಉಸ್ತುವಾರಿ ಸಚಿವರು ಈ ಯೋಜನೆ ರೂಪಿಸಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಬಿ.ಟಿ ಸತೀಶ್, ಭೂಮಾಪನ ಇಲಾಖೆ ಉಪನಿರ್ದೇಶಕರಾದ ಕೃಷ್ಣಕುಮಾರ್ ಮತ್ತಿತರರು ಹಾಜರಿದ್ದರು











Click it and Unblock the Notifications