ಸಾವು ಗೆದ್ದು ತವರಿನ ತೊಟ್ಟಿಲು ಸೇರಿದ ಕಂದಮ್ಮ!

By: ವಿನೋದ್ ಚಂದ್ರ
Subscribe to Oneindia Kannada

ಹಾಸನ, ಆ.5 : ಹುಟ್ಟಿದಾಗಲೇ ಸಾವು ಎದುರು ನಿಂತು ನಗುತಿತ್ತು. ಸಂತೈಕೆಗೆ ಇದ್ದದ್ದು ಕೇವಲ ನನ್ನದೇ ಕಣ್ಣೀರು...ಅದೂ ಕೂಡ ಹಕ್ಕಿಗಳ ಕೊಕ್ಕಿನಿಂದಾದ ಗಾಯದಿಂದ ಬಸಿದ ರಕ್ತದಲ್ಲಿ ಬೆರೆತು ಹೆಪ್ಪಾಗುತಿತ್ತು, ಕಡೆಯುಸಿರು ಬಿಡುವ ಮುನ್ನವೊಮ್ಮೆ ಜೋರಾಗಿ ಅತ್ತು ಕರೆದೆ ಅಮ್ಮ ಬರಲೇ ಇಲ್ಲ. ಆದರೆ, ದೇವರು ಬಿಡಲಿಲ್ಲ, ಹಾಗಾಗಿ ಜೀವಂತವಾಗಿದ್ದೇನೆ. ಭರವಸೆಯ ಬೆಳಕತ್ತ ಹೊರಟಿದ್ದೇನೆ ಬದುಕಲು ಸಹಕರಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.

ಇದು ಇಪ್ಪತ್ತು ದಿನಗಳ ಹಿಂದೆ ಹೊಳೆನರಸೀಪುರದ ರೆಸಾರ್ಟ್ ವೊಂದರ ಬಳಿ ನವಿಲುಗಳ, ದಾಳಿಗೆ ತುತ್ತಾಗಿ ಇನ್ನೇನು ಸತ್ತೆ ಹೋಯಿತೆಂದು ಭಾವಿಸಿದ್ದ ನವಜಾತ ಹೆಣ್ಣು ಶಿಶುವಿನ ಕಣ್ಣಿನಲ್ಲಿ ಇಂದು ಹೊರಡಿದ ಸಂದೇಶ. ಜನರ ಕಾಳಜಿ, ವೈದ್ಯರ ಆರೈಕೆಯಿಂದ ಗುಣ ಹೊಂದಿದ ಈ ಮಗು ನಗರ 'ತವರಿನ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್‌' ಆಶ್ರಯಕ್ಕೆ ಸೇರಿದೆ.

Hassan : The girl rescued by people now has a caring new home

ಜುಲೈ 13 ರಂದು ಸಂಜೆ 6.30ಕ್ಕೆ ಹೊಳೆನರಸೀಪುರದ ಪಾಲಿಕಾ ರೆಸಾರ್ಟ್ ಬಳಿ ಪೊದೆಯ ಪಕ್ಕದಲ್ಲಿ ಮಗುವೊಂದರ ಆರ್ತನಾದ ಕೇಳಿ ಬರುತ್ತಿತ್ತು. ನವಿಲುಗಳ ದಾಳಿಯಿಂದ ಮಗುವಿನ ದೇಹ ಪೂರ್ತಿ ರಕ್ತ ಸಿಕ್ತವಾಗಿತ್ತು. ರೆಸಾರ್ಟ್ ಮಾಲೀಕರು ಹಾಗೂ ಜನರ ಕಾಳಜಿಯಿಂದ 108 ಅಂಬುಲೆನ್ಸ್ ಮೂಲಕ ಮಗುವನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರ ಪ್ರಕಾರ ಆ ಮಗು ಹುಟ್ಟಿ ಒಂದು ದಿನವೂ ಕಳೆದಿರಲಿಲ್ಲ. ತಾಯಿಯ ಎದೆ ಹಾಲು, ಬಿಸಿ ಅಪ್ಪುಗೆ ಆರೈಕೆಗಳಿಲ್ಲದೆ ಕಾಡು ಹಕ್ಕಿಗಳ ದಾಳಿಗೆ ತುತ್ತಾಗಿದ್ದ ಮಗು ಬದುಕುಳಿಯುವುದು ಕಷ್ಟವೆನಿಸಿತ್ತು.

ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ದೇವರೇ ಈ ಕಂದನನ್ನು ಕಾಪಾಡು ಎಂದು ರಾತ್ರಿಯೇ ಹಾಸನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಸತತ ಇಪ್ಪತ್ತು ದಿನಗಳು ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಮಗುವನ್ನು ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯರು ತಮ್ಮ ಸ್ವಂತ ಮಗುವಿಗಿಂತಲೂ ಹೆಚ್ಚಾಗಿ ಪೋಷಿಸಿದರು.

ವೈದ್ಯರಾದ ಪ್ರಸನ್ನ ಕುಮಾರ್, ಡಾ.ಮನು ಪ್ರಕಾಶ್, ಡಾ.ಕುಮಾರ್, ಶ್ರೀನಿವಾಸ್, ಡಾ.ಅರ, ಡಾ.ಹರೀಶ್, ಡಾ.ಭರತ್, ಡಾ.ಮಧುರ, ಡಾ.ಸಂದೀಪ್ ರಾಜೇಂದ್ರ, ಜಲಂಧರ್ ನಿರಂತರ ನಿಗಾ ವಹಿಸಿದರು. ತೀವ್ರ ನಿಗಾ ಘಟಕದಲ್ಲಿ ಶುಶ್ರೂಷ ಸಿಬ್ಬಂದಿಗಳು ತಬ್ಬಲಿ ಕಂದನಿಗೆ ಎಲ್ಲಾ ರೀತಿಯ ಪ್ರೀತಿ ತೋರಿ ನಿರಂತರವಾಗಿ ಆರೈಕೆ ಮಾಡಿ ಗುಣ ಪಡಿಸಿದರು.

ಸಾವು ಗೆದ್ದ ಮಗುವಿಗೆ ಆಸರೆ ನೀಡಲು ಹಾಸನ ನಗರದ ತವರಿನ ತೊಟ್ಟಿಲು ಚಾರಿಟಬಲ್ ಟ್ರಸ್ಟ್ ಮುಂದೆ ಬಂದಿತು. ಆಗಸ್ಟ್ 4 ರಂದು ಆಸ್ಪತ್ರೆಯ ಆಡಳಿತಾಧಿಕಾರಿ ಚಿದಾನಂದ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಾ.ವೆಂಕಟೇಶ್ ಅವರ ಸಮ್ಮುಖದಲ್ಲಿ ಕಂದಮ್ಮನನ್ನು ತವರಿನ ತೊಟ್ಟಿಲ ಮಡಿಲಿಗೆ ವಹಿಸಲಾಯಿತು.

'ರೆಸಾರ್ಟ್ ಮಾಲೀಕರು ಹಾಗೂ ಸಾರ್ವಜನಿಕರ ಸಮಯೋಜಚಿತ ಸ್ಪಂದನೆ, ವೈದ್ಯರ ಆರೈಕೆಯಿಂದ ಮಗು ಜೀವಂತವಾಗಿದ್ದ ಸಂಪೂರ್ಣ ಗುಣಮುಖವಾಗಿದೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್ ಹೇಳಿದರು.

ಲೇಖನ : ವಿನೋದ್ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The baby girl was rescued in a forest on July 13, 2017 near Holenarasipura, Hassan district is now living in a safe new home. Thavarina Thottilu charitable trust the adopted child.
Please Wait while comments are loading...