ಬೆಂಗಳೂರು-ಹಾಸನ ನಡುವೆ ಇಂಟರ್‌ಸಿಟಿ ರೈಲು ಆರಂಭ?
ಹಾಸನ, ಫೆಬ್ರವರಿ 11: ರಾಜಧಾನಿ ಬೆಂಗಳೂರು ಮತ್ತು ಹಾಸನ ನಡುವೆ ಬೆಳಗ್ಗೆ ಇಂಟರ್ ಸಿಟಿ ರೈಲು ಸಂಚಾರ ಆರಂಭವಾಗಲಿದೆ. ಹಾಸನ ಸಂಸದ ಎಂ. ಶ್ರೇಯಸ್ ಪಟೇಲ್ ಈ ಕುರಿತು ಸಲ್ಲಿಕೆ ಮಾಡಿರುವ ಮನವಿಗೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ರೈಲು ಸೇವೆಯಿಂದ ವಿವಿಧ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ಸೋಮವಾರ ನವದೆಹಲಿಯಲ್ಲಿ ಹಾಸನ ಸಂಸದ ಎಂ. ಶ್ರೇಯಸ್ ಪಟೇಲ್ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಹಾಸನ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಮಾತುಕತೆ ನಡೆಸಿದರು. ಹಲವು ಮನವಿಗಳನ್ನು ಸಲ್ಲಿಸಿದರು. ಇದರಲ್ಲಿ ಬೆಂಗಳೂರು - ಹಾಸನ ನಡುವೆ ಬೆಳಗ್ಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಹ ಸೇರಿದೆ.

ಸಂಸದರು ಸಲ್ಲಿಸಿದ ಬೇಡಿಕೆಗಳು
* ಹಾಸನ-ಬೆಂಗಳೂರು ನಡುವೆ ನೂರಾರು ಜನರು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಜನರ ಪ್ರಯಾಣದ ಸಂಖ್ಯೆಗೆ ಅನುಗುಣವಾಗಿ ರೈಲು ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ, ಬೆಂಗಳೂರು - ಹಾಸನ ನಡುವೆ ಬೆಳಗ್ಗೆ 9ರಿಂದ 10ರ ನಡುವೆ ಒಂದು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ.
* ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ ಹೊಳೆನರಸೀಪುರ, ಅರಕಲಗೂಡು, ಕೋಣನೂರು ಮತ್ತು ಕುಶಾಲನಗರಗಳ ಮೂಲಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರೈಲು ವ್ಯವಸ್ಥೆ ಕಲ್ಪಿಸಿ, ಆ ಮೂಲಕ ಸಾವಿರಾರು ಜನರಿಗೆ ಪ್ರಯೋಜನ ಒದಗಿಸುವಂತೆಯೂ ಮನವಿ ಮಾಡಿದ್ದಾರೆ.
* ಹೊಳೆನರಸೀಪುರದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ, ಮೈಸೂರು ಮೂಲಕ ಅರಸೀಕೆರೆ- ಹೊಳೆನರಸೀಪುರಕ್ಕೆ ಬೆಳಗ್ಗೆ ಡೆಮು ರೈಲು ಸೇವೆಗೆ ಅನುಮತಿ ನೀಡುವಂತೆಯೂ ಮನವಿ ಸಲ್ಲಿಕೆ.
* ಹಾಸನದ ಭೂ ಪ್ರದೇಶ ಐಟಿ ಉದ್ಯಮಕ್ಕೂ ಪೂರಕವಾಗಿದ್ದು, ಬೆಂಗಳೂರಿಗೆ ಸನಿಹದಲ್ಲಿದೆ. ಇಲ್ಲಿ ಕುಶಲ ಉದ್ಯೋಗಿಗಳು, ಸಂಪನ್ಮೂಲಗಳ ಲಭ್ಯತೆಯೂ ಹೇರಳವಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಹಾಸನದಲ್ಲಿ ಒಂದು ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವಂತೆಯೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್‌ಗೆ ಮನವಿ ಮಾಡಲಾಗಿದೆ.
ಸಚಿವರ ಭೇಟಿ ಕುರಿತು ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ನನ್ನ ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವರು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು' ಎಂದು ಹೇಳಿದ್ದಾರೆ.
ಸಂಸದ ಎಂ. ಶ್ರೇಯಸ್ ಪಟೇಲ್ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿ ಹಾಸನ ಜಿಲ್ಲೆಯ ಅಭಿವೃದ್ಧಿಯ ವಿವಿಧ ಯೋಜನೆಯ ಕುರಿತು ಮನವಿಗಳನ್ನು ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಅಭಿವೃದ್ಧಿಗೊಳಿಸಬೇಕು. ಆಸ್ಪತ್ರೆಯ ಅಭಿವೃದ್ಧಿಯಿಂದ, ವಿಮೆ ಹೊಂದಿರುವ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಸಚಿವರ ಜೊತೆ ಚರ್ಚಿಸಿದರು.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನ ಹಾಕಿ ಟರ್ಫ್ ನಿರ್ಮಾಣವಾದರೆ, ರಾಷ್ಟ್ರೀಯ ಕ್ರೀಡೆಗೆ ನೆರವಾಗಲಿದೆ. ಇದಕ್ಕಾಗಿ ಖೇಲೋ ಇಂಡಿಯಾ ಯೋಜನೆಯಡಿ ಹತ್ತು ಕೋಟಿ ರೂಪಾಯಿಗಳ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ. ನನ್ನ ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವರು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ಕೊಟ್ಟಿದ್ದಾರೆ ಎಂದು ಸಂಸದರು ಹೇಳಿದ್ದಾರೆ.












Click it and Unblock the Notifications