ಹಾಸನ ಜಿಲ್ಲಾ ಪಂಚಾಯತ್ ನೌಕರನಿಗೆ ಎಸಿ ಜಗದೀಶ್ ಕಪಾಳಮೋಕ್ಷ
ಹಾಸನ, ಅಕ್ಟೋಬರ್, 17: ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡಗೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಹಾಸನಾಂಬೆ ದೇವಾಲಯದ ಬಳಿ ಕಪಾಳಮೋಕ್ಷ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು. ಅವರು ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇವಾಲಯಕ್ಕೆ ನುಗ್ಗಿದ ಹಿನ್ನೆಲೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಶಿವೇಗೌಡಗೆ ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬಸ್ಥರು, ಭಕ್ತರು, ಅಧಿಕಾರಿಗಳ ನಡುವೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿದ್ದರು. ಈ ಹಿನ್ನೆಲೆ ಎಸಿ ಜಗದೀಶ್ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲರಿಗೂ ಒಂದೇ ನ್ಯಾಯ ಎಂದ ಜಗದೀಶ್
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ಲಕ್ಷಾಂತರ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ತಮ್ಮ ಪರಿವಾರ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ ಮಾಡಿ ವಿಐಪಿ ಗೇಟ್‌ನಲ್ಲಿ ಆಗಮಿಸಿದ್ದಾರೆ. ಇದನ್ನು ಕಂಡ ಎಸಿ ಜಗದೀಶ್ ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೆ ಓಡಿ ಬರುತ್ತಿದ್ದೀರಾ? ನಿಮಗೆ ಈ ಗೇಟ್‌ನಲ್ಲಿ ಯಾರು ಒಳಗಡೆ ಬಿಟ್ಟಿದ್ದು? ಎಂದು ನಿಂದಿಸಿದ್ದಾರೆ.

ಶಿವೇಗೌಡಗೆ ಜಗದೀಶ್ ಕಪಾಳಮೋಕ್ಷ
ಸರದಿಯಲ್ಲಿ ಹೋಗುವುದು ಬಿಟ್ಟು ಇಲ್ಲಿ ಯಾಕೆ ಬಂದಿದ್ದೀರಾ? ಎಂದು ಕಿಡಿಕಾರಿದ್ದಾರೆ. ಆಗ ಶಿವೇಗೌಡ ತಾನೂ ಜಿಲ್ಲಾ ಪಂಚಾಯತ್ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಎಸಿ ಜಗದೀಶ್, ಶಿವೇಗೌಡ ಕೊರಳಿನಲ್ಲಿ ಧರಿಸಿದ್ದ ಕಾರ್ಡ್ ಅನ್ನು ಕಿತ್ತು ಎಸೆದಿದ್ದಾರೆ. ಅಲ್ಲದೇ ಕುಟುಂಬದವರ ಮುಂದೆಯೇ ಶಿವೇಗೌಡಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಸುತ್ತಮುತ್ತ ನೆರೆದಿದ್ದ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳು ಆಶ್ಚರ್ಯಚಿಕಿತರಾಗಿದ್ದಾರೆ.












Click it and Unblock the Notifications