ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿಲ್ಲದ ಕಾಡಾನೆಗಳ ಆರ್ಭಟ, ಮನೆಯಿಂದ ಹೊರಬಾರದ ಜನ
ಹಾಸನ, ಡಿಸೆಂಬರ್, 23: ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಕಾಡಾನೆಗಳ ದಾಳಿಯಿಂದ ಇಲ್ಲಿನ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಹಗಲು, ರಾತ್ರಿ ವೇಳೆ ಗುಮ್ಮನಹಳ್ಳಿ ಗ್ರಾಮದೊಳಗೆ ಕಾಡಾನೆಗಳು ದಾಳಿ ಮಾಡುತ್ತಲೇ ಇವೆ.
ರೈತರು ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುವುದಲ್ಲದೆ, ಮಾನವನ ಮೇಲೂ ದಾಳಿ ನಡೆಸಿದ ಹಲವು ಉದಾಹರಣೆಗಳಿವೆ. ಹೀಗೆ ಸತತವಾಗಿ ಕಾಡಾನೆಗಳ ದಾಳಿಯಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಕಳೆದ ರಾತ್ರಿ ಸಕಲೇಶಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಮಕ್ಕೆ ಒಂಟಿಸಲಗ ಆಗಮಿಸಿದೆ.
ನಂತರ ಕಾಡಾನೆಯನ್ನು ಹಿಂಬಾಲಿಸಿದ ಟಾಸ್ಕ್ ಫೋರ್ಸ್ ಸಿಬ್ಬಂದಿ, ಗ್ರಾಮಸ್ಥರಿಗೆ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿದೆ.

ಕಾಡಾನೆಗಳ ದಾಳಿಯಿಂದ ಜನತೆ ಕಂಗಾಲು
ಕಲೆವು ದಿನಗಳ ಕಾಲ ಕಾಡಾನೆಗಳ ಹಾವಳಿ ಕಡಿಮೆ ಆಗಿತ್ತು. ಆಗಿನಿಂದ ಗ್ರಾಮಸ್ಥರು ನಿರ್ಭಯವಾಗಿ ಮನೆಯಿಂದ ಹೊರಬರಲು ಆರಂಭಿಸಿದ್ದರು. ಹಾಗೆಯೇ ಜಮೀನು ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ನಿನ್ನೆ ಮತ್ತೆ ಕಾಡಾನೆ ಗುಮ್ಮನಹಳ್ಳಿ ಗ್ರಾಮದೊಳಗೆ ಹಾದು ಹೋದ ಕಾರಣ ಸ್ಥಳೀಯರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಮುಂದುವರೆದ ಕಾಡಾನೆಗಳ ದಾಳಿ
ಇನ್ನು ಹೊಳಲು ಗ್ರಾಮದ ಸಮೀಪ ಕಾಫಿ ತೋಟದೊಳಗೆ ಬೀಡು ಕಾಡಾನೆಗಳ ಹಿಂಡು ಬಿಟ್ಟಿವೆ. ಆದ್ದರಿಂದ ರಾತ್ರಿ ವೇಳೆ ಮನೆಯಿಂದ ಹೊರಬಾರದಂತೆ ಹಾಗೂ ಹಗಲು ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಿಗೆ ಸೂಚನೆ ನೀಡಿದೆ. ಮತ್ತೊಂದೆಡೆ ಆಹಾರ ಅರಸಿ ದೊಡ್ಡದೀಣೆ ಗ್ರಾಮಕ್ಕೂ ಕೂಡ ಒಂದು ಕಾಡಾನೆ ಬಂದಿದ್ದು, ಕಾಡಾನೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲಕಾಲ ಗ್ರಾಮದೊಳಗೆ ಇದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಆರ್‌ಆರ್‌ಟಿ ಸಿಬ್ಬಂದಿ ಹಿಮ್ಮೆಟ್ಟಿಸಿದ್ದಾರೆ. ಹಾಗೆಯೇ ಹೆಬ್ಬನಹಳ್ಳಿ ಗ್ರಾಮದಲ್ಲಿ ರಸ್ತೆ ದಾಟಿ ಕಾಫಿ ತೋಟದೊಳಗೆ ಒಂದು ಕಾಡಾನೆ ಹೋಗಿದ್ದು, ಇಲ್ಲಿನ ಜನರು ಜಮೀನು ಕೆಲಸಗಳಿಗೆ ಹೋಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications