ಬಿ. ಟೆಕ್ ಪದವೀಧರ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷ
ಹಾಸನ, ಫೆಬ್ರವರಿ 4; ಹಾಸನ ತಾಲೂಕು ದುದ್ದ ಹೋಬಳಿ ಮೆಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ. ಟೆಕ್ ಪದವೀಧರ ಎಚ್. ಎಂ. ಲೋಕೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಣಿ ಆಯ್ಕೆಯಾದರು.
ಅಜಯ್ ಕುಮಾರ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 11 ಸದಸ್ಯರ ಪೈಕಿ 6 ಮತಗಳನ್ನು ಪಡೆದು ಲೋಕೋಶ್ ಆಯ್ಕೆಯಾದರು. ಬಿ. ಇ, ಬಿ. ಟೆಕ್ ವ್ಯಾಸಂಗ ಮಾಡಿರುವ ಲೋಕೇಶ್ ಹಾಸನದಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ.
"ನನಗೆ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಎನಿಸಿತು. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಬಯಸಿದಾಗ ಉತ್ತಮ ಬೆಂಬಲ ಸಿಕ್ಕಿತು. ಗೆಲುವು ಸಹ ಸಾಧಿಸಿದೆ, ಈಗ ಅಧ್ಯಕ್ಷನಾಗಿದ್ದೇನೆ" ಎಂದು ಲೋಕೇಶ್ ಹೇಳಿದರು.

"ಸರ್ಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಮಾಡುವ ಗುರಿ ಇದೆ. ನನ್ನ ಅಧಿಕಾರ ಅವಧಿಯಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ" ಎಂದು ಲೋಕೇಶ್ ಹೇಳಿದ್ದಾರೆ.
"1 ರಿಂದ ದ 10ನೇ ತರಗತಿ ತನಕ ಶಾಲೆ ಇದೆ. ಮೊದಲು ಶಾಲೆಗೆ ಒಳ್ಳೆಯ ಹೆಸರು ಇತ್ತು. ಈಗ ಅದು ಇಲ್ಲವಾಗಿದೆ. ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ" ಎಂದು ಲೋಕೇಶ್ ವಿವರಣೆ ನೀಡಿದರು.
ಕುಡಿಯುವ ನೀರು, ರಸ್ತೆ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಯೋಜನೆಯನ್ನು ಲೋಕೇಶ್ ಹಾಕಿಕೊಂಡಿದ್ದಾರೆ.












Click it and Unblock the Notifications