ಬೆಂಗಳೂರು-ಹಾಸನ ಇಂಟರ್ ಸಿಟಿ ರೈಲು ಸಕಲೇಶಪುರಕ್ಕೆ ವಿಸ್ತರಣೆ?
ಹಾಸನ, ಫೆಬ್ರವರಿ 15: ಹಾಸನ ಜಿಲ್ಲೆಯ ಸಕಲೇಶಪುರಕ್ಕೂ ಇಂಟರ್ ಸಿಟಿ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ಬೆಂಗಳೂರು-ಹಾಸನ ನಡುವಿನ ಇಂಟರ್ ಸಿಟಿ ರೈಲನ್ನು ವಿಸ್ತರಣೆ ಮಾಡಿ ತಾಲೂಕಿನ ಜನರಿಗೂ ಅನುಕೂಲ ಮಾಡಿಕೊಡಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಹಾಸನ-ಬೆಂಗಳೂರು ನಡುವೆ ಮತ್ತೊಂದು ಇಂಟರ್ ಸಿಟಿ ರೈಲು ಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಹಾಸನ- ಬೆಂಗಳೂರು ಇಂಟರ್ ಸಿಟಿ ರೈಲನ್ನು ಸಕಲೇಶಪುರ ತನಕ ವಿಸ್ತರಣೆ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಬೆಂಗಳೂರಿನಲ್ಲಿ ಸಚಿವ ವಿ. ಸೋಮಣ್ಣ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇಂಟರ್ ಸಿಟಿ ರೈಲು ಸದ್ಯ ಬೆಂಗಳೂರು-ಹಾಸನ ನಡುವೆ ಸಂಚರಿಸುತ್ತಿದ್ದು ಸಕಲೇಶಪುರ ತನಕ ವಿಸ್ತರಿಸಿದರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನರು ಪ್ರತಿದಿನ ಬೆಂಗಳೂರಿಗೆ ಹೋಗಿ ವಾಪಸ್ ಆಗಲು ಅನುಕೂಲವಾಗಲಿದೆ ಎದು ವಿವರಿಸಿದ್ದಾರೆ.

ಪ್ರತಿದಿನ ಸಕಲೇಶಪುರ ಹಾಗೂ ಆಲೂರು ತಾಲೂಕಿನಿಂದ ನೂರಾರು ಜನರು ವಿವಿಧ ಕೆಲಸಗಳಿಗೆ ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಾರೆ. ಕೆಲವರು ಹಾಸನದಿಂದ ರೈಲು ಮುಖಾಂತರ ಬೆಂಗಳೂರಿಗೆ ಸಾಗುತ್ತಾರೆ. ಕೆಲವರು ದುಬಾರಿ ಬಸ್ ದರ ಪಾವತಿ ಮಾಡಿ ರಾಜಧಾನಿಗೆ ಹೋಗಬೇಕಿದೆ. ಆಸ್ಪತ್ರೆ, ಸರ್ಕಾರಿ ಕೆಲಸ, ವಿದ್ಯಾಭ್ಯಾಸ ಸೇರಿದಂತೆ ಸಂಚಾರ ನಡೆಸುವ ಜನರಿಗೆ ರೈಲು ಸೇವೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
ಇಂಟರ್ ಸಿಟಿ ರೈಲನ್ನು ವಿಸ್ತರಿಸಿದರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನರಿಗೆ ಬಹಳ ಅನುಕೂಲವಾಗುತ್ತದೆ ಮತ್ತು ಆಲೂರು ರೈಲು ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸಚಿವರು ಸಹ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.
ಹೊಸ ಇಂಟರ್ ಸಿಟಿ ರೈಲು: ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ.
ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ, ಹೊಳೆನರಸೀಪುರ, ಅರಕಲಗೂಡು, ಕೋಣನೂರು ಮತ್ತು ಕುಶಾಲನಗರಗಳ ಮೂಲಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರೈಲ್ವೆ ವ್ಯವಸ್ಥೆ ಕಲ್ಪಿಸಿ, ಆ ಮೂಲಕ ಸಾವಿರಾರು ಜನರಿಗೆ ಪ್ರಯೋಜನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೊಳೆನರಸೀಪುರದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ, ಮೈಸೂರು ಮೂಲಕ ಅರಸೀಕೆರೆ- ಹೊಳೆನರಸೀಪುರಕ್ಕೆ ಬೆಳಗ್ಗೆ ಡೆಮು ರೈಲು ಸೇವೆಗೆ ಅನುಮತಿ ನೀಡುವಂತೆಯೂ ಮನವಿ ಸಲ್ಲಿಸಿದ್ದಾರೆ.
ಹಾಸನ ನಗರ ಬೆಂಗಳೂರಿಗೆ ಸಮೀಪದಲ್ಲಿದ್ದು, ಪ್ರತಿನಿತ್ಯ ನೂರಾರು ಜನರು ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದಾರೆ. ಆದರೆ ಜನರ ಪ್ರಯಾಣದ ಸಂಖ್ಯೆಗೆ ಅನುಗುಣವಾಗಿ ರೈಲ್ವೆ ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ, ಬೆಂಗಳೂರು-ಹಾಸನ ನಡುವೆ ಬೆಳಗ್ಗೆ 9 ರಿಂದ 10ರ ನಡುವೆ ಒಂದು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.












Click it and Unblock the Notifications