ಗೋಡ್ಸೆಯನ್ನು ಖಂಡಿಸುವಂತೆ ವಿಶ್ವ ಹಿಂದೂ ಪರಿಷತ್‌ಗೆ ಕುನಾಲ್ ಕಾಮ್ರಾ ಸವಾಲು
ಗುರ್‌ಗಾಂವ್, ಸೆ.11: ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಖಂಡಿಸುವಂತೆ ವಿಶ್ವ ಹಿಂದೂ ಪರಿಷತ್‌ಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಭಾನುವಾರ ಸವಾಲು ಹಾಕಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರದ್ದುಪಡಿಸುವಂತೆ ಒತ್ತಾಯಿಸಿದ ನಂತರ ಗುರುಗ್ರಾಮ್‌ನಲ್ಲಿ ಸೆಪ್ಟೆಂಬರ್ 17 ರಂದು ನಡೆಯಬೇಕಿದ್ದ ಕುನಾಲ್ ಕಾಮ್ರಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಈ ಬೆನ್ನಲ್ಲೆ ಕುನಾಲ್ ಕಮ್ರಾ ಬಲಪಂಥೀಯ ಹಿಂದೂ ಸಂಘಟನೆಗೆ ಬಹಿರಂಗ ಪತ್ರ ಬರೆದು, ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ತಾನು ವಿಎಚ್‌ಪಿಗಿಂತ "ದೊಡ್ಡ ಹಿಂದೂ" ಎಂದು ಘೋಷಿಸಿಕೊಂಡಿದ್ದಾರೆ.
ಶುಕ್ರವಾರ, ವಿಎಚ್‌ಪಿಯು ಗುರುಗ್ರಾಮ್‌ನ ಉಪ ಆಯುಕ್ತರಿಗೆ ಕುನಾಲ್ ಕಾಮ್ರಾ ಪ್ರದರ್ಶನವನ್ನು ರದ್ದುಗೊಳಿಸುವಂತೆ ಪತ್ರವನ್ನು ಸಲ್ಲಿಸಿತ್ತು. ಬಜರಂಗದಳವು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿತು, ಅವರು ನಿರ್ದಿಷ್ಟ ಧರ್ಮದ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು.

ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರದರ್ಶನವನ್ನು ರದ್ದುಗೊಳಿಸುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಬರೆದ ಪತ್ರವನ್ನು ಕುನಾಲ್ ಕಾಮ್ರಾ ಹಂಚಿಕೊಂಡಿದ್ದಾರೆ. ವಿಎಚ್‌ಪಿಯನ್ನು ಕೇವಲ "ಹಿಂದೂ ಪರಿಷತ್" ಎಂದು ಸಂಬೋಧಿಸಿದ್ದಾರೆ, ಅವರ ಪ್ರಕಾರ, ಪ್ರಪಂಚದಾದ್ಯಂತದ ಹಿಂದೂಗಳು ಅದನ್ನು ತಮ್ಮ ಗುತ್ತಿಗೆದಾರ ಎಂದು ಅನುಮತಿ ನೀಡಿಲ್ಲ ಎಂದಿದ್ದಾರೆ.
''ನಾನು ಹೆಮ್ಮೆಯಿಂದ ಜೈ ಶ್ರೀ ಸೀತಾ-ರಾಮ್ ಮತ್ತು ರಾಧಾ-ಕೃಷ್ಣ ಎಂದು ಹೇಳಬಲ್ಲೆ. ನೀವು ನಿಜವಾಗಿಯೂ ಭಾರತೀಯರಾಗಿದ್ದರೆ, ಗೋಡ್ಸೆ ಮುರ್ದಾಬಾದ್ ಬರೆಯುವ ಧೈರ್ಯವನ್ನು ತೋರಿಸಿ. ಇಲ್ಲದಿದ್ದರೆ ನಾವು ನಿಮ್ಮನ್ನು ಹಿಂದೂ ವಿರೋಧಿ ಮತ್ತು ಭಾರತೀಯ ವಿರೋಧಿ ಎಂದು ಪರಿಗಣಿಸುತ್ತೇವೆ'' ಎಂದು ಕುನಾಲ್ ಕಮ್ರಾ ಪತ್ರದಲ್ಲಿ ಬರೆದಿದ್ದಾರೆ.

ತಾನು ಹಿಂದೂ ಸಂಸ್ಕೃತಿಯನ್ನು ಅವಮಾನಿಸುತ್ತಿರುವ ಯಾವುದೇ ವಿಡಿಯೋ ಕ್ಲಿಪ್ ಇದದ್ದೇ ಅದನ್ನು ತನಗೆ ತೋರಿಸಲು ವಿಎಚ್‌ಪಿಗೆ ತಿಳಿಸಿದ್ದಾರೆ. ತಾನು ಸರ್ಕಾರವನ್ನು ಅಪಹಾಸ್ಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ತಾನು ವಿಎಚ್‌ಪಿಗಿಂತ "ದೊಡ್ಡ ಹಿಂದೂ" ಎಂದು ಘೋಷಿಸಿಕೊಂಡಿರುವ ಕುನಾಲ್ ಕಮ್ರಾ, ನಾನು ಭಯ ಹುಟ್ಟಿಸುವ ಮತ್ತು ಬೆದರಿಕೆಗಳನ್ನು ನೀಡುವ ಮೂಲಕ ತನ್ನ ಜೀವನಕ್ಕೆ ಸಂಪಾದಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ವಿಎಚ್‌ಪಿ ಜಿಲ್ಲಾಧಿಕಾರಿಗೆ ನೀಡಿರುವ ಪತ್ರದಲ್ಲಿ, "2022ರ ಸೆಪ್ಟೆಂಬರ್ 17ರಂದು ಸ್ಟುಡಿಯೋ ಕ್ಸೋ ಬಾರ್‌ನಲ್ಲಿ ಕುನಾಲ್ ಕಮ್ರಾ ಎಂಬುವರು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ವ್ಯಕ್ತಿ ತನ್ನ ಕಾಮಿಡಿ ಶೋಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡಿದ್ದಾನೆ. ಅವರ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಇದೇ ಕಾರಣಕ್ಕಾಗಿ ಈ ಕಾರ್ಯಕ್ರಮವು ಗುರುಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಈ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ನಾವು ವಿನಂತಿಸುತ್ತೇವೆ ಇಲ್ಲದಿದ್ದರೆ VHP ಕಾರ್ಯಕರ್ತರು ಮತ್ತು ಬಜರಂಗದಳ ಕಾರ್ಯಕರ್ತರು ಇದರ ವಿರುದ್ಧ ಪ್ರತಿಭಟಿಸುತ್ತಾರೆ. ಆದ್ದರಿಂದ, ಈ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಿ ಮತ್ತು ನಮ್ಮೊಂದಿಗೆ ಸರಿಯಾದ ಕ್ರಮದ ಮಾಹಿತಿ ಹಂಚಿಕೊಳ್ಳಿ" ಎಂದಿದೆ.
ಗುರುಗ್ರಾಮ್‌ನ ಸೆಕ್ಟರ್ 29 ನಲ್ಲಿರುವ ಸ್ಟುಡಿಯೋ ಕ್ಸೋ ಬಾರ್‌ನಲ್ಲಿ ಕುನಾಲ್ ಕಮ್ರಾ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.












Click it and Unblock the Notifications