ಹುಬ್ಬಳ್ಳಿಯಲ್ಲಿ ಮಹಿಳೆ, ಯುವತಿ ಮೇಲೆ ಗ್ಯಾಂಗ್ ರೇಪ್
ಹುಬ್ಬಳ್ಳಿ, ಜೂನ್ 3 : ಉತ್ತರ ಪ್ರದೇಶದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರಗಳ ಬಿಸಿ ಆರುವ ಮುನ್ನವೇ ಹುಬ್ಬಳ್ಳಿಯಲ್ಲಿ ಆರು ಮಂದಿಯ ಗುಂಪು ಮಹಿಳೆ ಮತ್ತು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಮಹಿಳೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಹುಬ್ಬಳ್ಳಿಯ ರಾಯನಾಳ ಗ್ರಾಮದಲ್ಲಿ ಮಹಿಳೆ ಮತ್ತು ಯವತಿ ಮೇಲೆ ಆರು ಮಂದಿಯ ದುಷ್ಕರ್ಮಿಗಳ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಮಹಿಳೆ ಮತ್ತು ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು, ಮಹಿಳೆಯ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ಬಾಂತಿಕಟ್ಟಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಯುವತಿಯನ್ನು ಅಪಹರಿಸಿಕೊಂಡು ಬಂದ ಆರು ಮಂದಿ ದುಷ್ಕರ್ಮಿಗಳ ತಂಡ, ರಾಯನಾಳ ಗ್ರಾಮದ ಹೊರವಲಯದಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವತಿಯ ಹೇಳಿಕೆಯನ್ನು ಪೊಲೀಸರು ಇನ್ನೂ ಪಡೆಯಬೇಕಾಗಿದೆ. [ಉತ್ತರ ಪ್ರದೇಶದಲ್ಲಿ ಅಮಾನುಷ ಅತ್ಯಾಚಾರ]
ದೂರಿನಲ್ಲಿ ಏನಿದೆ : ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಅನ್ವಯ ಸೋಮವಾರ ರಾತ್ರಿ ಪರಿಚಯಸ್ಥರು ಅವರಿಗೆ ಕರೆ ಮಾಡಿ ರೈಲ್ವೆ ನಿಲ್ದಾಣದ ಬಳಿಗೆ ಬರುವಂತೆ ಹೇಳಿದ್ದಾರೆ. ಅಲ್ಲಿಗೆ ಆಗಮಿಸಿದ ಅವರನ್ನು ಬೆದರಿಸಿ ಬೈಕ್ ನಲ್ಲಿ ಅಪಹರಿಸಿ ಗ್ರಾಮದ ಹೊರವಲಯಕ್ಕೆ ಕರೆತಂದು ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು, ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮಹಿಳೆ ಮತ್ತು ಯುವತಿಯ ಫೋನ್ ಕರೆಗಳ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.












Click it and Unblock the Notifications