ಧಾರವಾಡ : ಜನರಿಂದ ಶತಮಾನ ಕಂಡ ಅರಳಿಮರದ ಕಟ್ಟೆ ಸ್ವಚ್ಛ
ಧಾರವಾಡ, ಡಿಸೆಂಬರ್ 05 : ಧಾರವಾಡದ ಕಾಲೇಜು ರಸ್ತೆಯಲ್ಲಿರುವ 115 ವರ್ಷಗಳನ್ನು ಪೂರೈಸಿರುವ ಅರಳಿ ಮರದ ಕಟ್ಟೆಯನ್ನು ಸ್ವಚ್ಛಗೊಳಿಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ.
ಧಾರವಾಡದಲ್ಲಿ ಜನವರಿ 4, 5 ಮತ್ತು 6ರಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದ್ದರಿಂದ, ಜಿಲ್ಲಾಡಳಿತ, ಮಹಾನಗರಪಾಲಿಕೆ, ಕಸಾಪ ಹಾಗೂ ಕನ್ನಡ ಪರ ಕಾರ್ಯಕರ್ತರು ಸ್ವಚ್ಛತಾ ಆಂದೋಲನ ಆರಂಭಿಸಿದ್ದಾರೆ.
ಬುಧವಾರ ನಗರದ ಕಾಲೇಜು ರಸ್ತೆಯಲ್ಲಿರುವ 115 ವರ್ಷಗಳನ್ನು ಪೂರೈಸಿರುವ ಅರಳಿ ಮರದ ಕಟ್ಟೆಯನ್ನು ಶುಚಿಗೊಳಿಸಿ, ಕಟಕಟೆಗೆ ಬಣ್ಣ ಬಳಿದು ಸುಂದರಗೊಳಿಸಲಾಯಿತು. ರಂಗಾಯಣದ ನೇತೃತ್ವದಲ್ಲಿ ಕಲಾವಿದರು ಬಣ್ಣ ಹಚ್ಚಿದರು.

ಶತಮಾನ ಕಂಡ ವೃಕ್ಷ : ಕಾಲೇಜು ರಸ್ತೆಯಲ್ಲಿ ಎಲ್ಐಸಿ ಕಚೇರಿ ಬಳಿ ಇರುವ ಈ ಅರಳಿ ಮರವನ್ನು ಇಂಗ್ಲೆಂಡ್‌ನ ದೊರೆ ಇಂಡಿಯಾದ ಚಕ್ರಾಧಿಪತ್ಯ ಹೊಂದಿದ್ದ 7 ನೇಎಡ್ವರ್ಡನ ಪಟ್ಟಾಭಿಷೇಕದ ಸವಿನೆನಪಿಗಾಗಿ, ಗಿಬ್ ದಂಪತಿಗಳು ರೊದ್ದ ಶ್ರೀನಿವಾಸರಾಯರ ಉಪಸ್ಥಿತಿಯಲ್ಲಿ 1903 ರ ಜನವರಿ 1 ರಂದು ನೆಟ್ಟಲಾಗಿತ್ತು. ಈಗ ಅರಳೀಕಟ್ಟೆ 115 ವರ್ಷಗಳನ್ನು ಪೂರೈಸಿದೆ.
ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ್, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್. ಚನ್ನೂರ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications