Chigari Bus: ಅವಳಿನಗರದಲ್ಲಿ ಬಿಆರ್‌ಟಿಎಸ್‌ನಿಂದ ಸಮಸ್ಯೆ ಆಗುತ್ತಿದೆಯೇ?: ಬೇಡಿಕೆಗಳೇನು
ಧಾರವಾಡ, ಜುಲೈ 15: ವಾಣಿಜ್ಯ ನಗರಿ ಮತ್ತು ವಿದ್ಯಾಕಾಶಿಗೆ ಸಂಪರ್ಕ ಕಲ್ಪಿಸಿರುವ ಮತ್ತು ಜನರಿಗೆ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿರುವ ಬಿಆರ್‌ಟಿಎಸ್ ಚಿಗರಿ ಬಸ್ ಯೋಜನೆ ಇತ್ತೀಚೆಗೆ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿದೆ.
ಧಾರವಾಡ ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಬಿಆರ್‌ಟಿಎಸ್‌ನಿಂದ ಹಾಕಿರುವ ಬ್ಯಾರಿಕೇಡ್ ಕಳಪೆ ಇರುವುದರಿಂದಲೋ, ಚಿಗರಿ ಬಸ್‌ಗಳು ಸಾರ್ವಜನಿಕರ ಮೈಮೇಲೆಯೇ ಏರಿ ಬರುವುದರಿಂದಲೋ ಆ ರಸ್ತೆಯಲ್ಲಿ ಅಪಘಾತ ನಡೆಯುತ್ತಿರುವುದರಿಂದಲೋ ಆಕ್ರೋಶಕ್ಕೆ ಗುರಿಯಾಗುತ್ತಿದೆ.

ಅವಳಿನಗರ ಬೆಳೆದಂತೆಲ್ಲ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹುಬ್ಬಳ್ಳಿ ಧಾರವಾಡ ನಗರಗಳ ಮಧ್ಯೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಚಿಗರಿ ಬಸ್‌ಗೆ ಪ್ರತ್ಯೇಕ ರಸ್ತೆಯ ವ್ಯವಸ್ಥೆ ಇದ್ದು ಆ ರಸ್ತೆಯಲ್ಲಿ ಚಿಗರಿ ಬಸ್‌ಗಳಲ್ಲದೇ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿಲ್ಲ. ಆ ನಿಗದಿತ ರಸ್ತೆಯಲ್ಲಿ ಬಿಆರ್‌ಟಿಎಸ್ ಬಸ್‌ಗಳು ಮಾತ್ರವೇ ಸಂಚರಿಸಬೇಕೆಂಬ ನಿಯಮ ಇದೆ.
ಧಾರವಾಡದಿಂದ ಪಾದಯಾತ್ರೆ, ಹೋರಾಟ
ಇದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ಕೆಲ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಬಿಆರ್‌ಟಿಎಸ್ ರಸ್ತೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಧಾರವಾಡ ಧ್ವನಿ ಎಂಬ ಪಕ್ಷಾತೀತ ಹೋರಾಟ ಸಂಘಟನೆಯೊಂದು ಪಾದಯಾತ್ರೆ ಮಾಡಿ ಆಗ್ರಹಿಸಿದೆ.
ಬೇಡಿಕೆಗಳು ಏನು?
ಪ್ರತಿದಿನ ಶೇ.95 ರಷ್ಟು ಸಮಯ ಬಿಆರ್‌ಟಿಎಸ್ ರಸ್ತೆ ಖಾಲಿಯಾಗಿಯೇ ಇರುತ್ತವೆ. ಸಾರ್ವಜನಿಕ ರಸ್ತೆ ಪ್ರತಿದಿನ ವಾಹನಗಳಿಂದ ಕಿಕ್ಕಿರಿದು ತುಂಬಿರುತ್ತವೆ. ಆದ್ದರಿಂದ ಬಿಆರ್‌ಟಿಎಸ್ ರಸ್ತೆಯಲ್ಲಿ ಧಾರವಾಡ ಜ್ಯುಬಿಲಿ ವೃತ್ತದಿಂದ ನವಲೂರಿನವರೆಗೆ, ಉಣಕಲ್‌ನಿಂದ ರಾಣಿ ಚೆನ್ನಮ್ಮ ವೃತ್ತದವರೆಗೂ ಬೈಕ್, ಆಟೊ, ಕಾರು ಮತ್ತು ಲಘು ವಾಹನಗಳು ಸಂಚರಿಸಲು ಅನುಮತಿ ನೀಡಬೇಕು. ಇದರಿಂದ ನಗರದ ದಟ್ಟಣೆ ಕಡಿಮೆ ಆಗಲಿದೆ ಎಂದು ಹೋರಾಟಗಾರರು ಆಗ್ರಹಿಸಿದರು.

ಧಾರವಾಡ ಧ್ವನಿ ಸಂಘಟನೆ ಸದಸ್ಯರು ನವಲೂರಿನಿಂದ ಬಿಆರ್‌ಟಿಎಸ್ ರಸ್ತೆಯಲ್ಲೇ ಧಾರವಾಡ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸುವ ಮೂಲಕ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಸ್ ಮುಂದೆ ಮಲಗಿ, ತೆಂಗಿನ ಕಾಯಿ ಒಡೆದು ಆಕ್ರೋಶ
ಈ ಪಾದಯಾತ್ರೆಗೆ ಜೆಎಸ್‌ಎಸ್ ಸಂಸ್ಥೆ ಕೂಡ ಬೆಂಬಲ ನೀಡಿತು ನವಲೂರಿನಿಂದ ಪಾದಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಚಿಗರಿ ಬಸ್ ಮಧ್ಯೆ ಬಂದಿದ್ದಕ್ಕೆ ಆಕ್ರೋಶಗೊಂಡ ಹೋರಾಟಗಾರರು ಆ ಚಿಗರಿ ಬಸ್‌ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಚಿಗರಿ ಬಸ್‌ಗೆ ಪೂಜೆ ಮಾಡಿ ಅದರ ಮುಂದೆ ತೆಂಗಿನಕಾಯಿ ಒಡೆದು ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿದರು. ಒಟ್ಟಾರೆ ಬಿಆರ್‌ಟಿಎಸ್ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒಂದು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಸಾರ್ವಜನಿಕರನ್ನೂ ಸೇರಿಸಿ ಶೀಘ್ರ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಹೋರಾಟಗಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications