ಧಾರವಾಡ ಐಐಟಿ ಸ್ಥಾಪನೆಗೆ ಸಿದ್ದರಾಮಯ್ಯ ಅಡ್ಡಿಪಡಿಸಿದ್ದರು; ಜೋಶಿ
ಧಾರವಾಡ ಐಐಟಿ ವಿಚಾರದಲ್ಲಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಅವಧಿಯಲ್ಲಿ ಜಾಗ ಕೊಡದೇ ತೊಂದರೆ ಕೊಟ್ಟಿದ್ದರು ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.
ಧಾರವಾಡ, ಮಾರ್ಚ್ 08; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯೋಜನೆ ಜಾರಿಗೊಳಿಸಿದ ಕೀರ್ತಿ ಯಾರಿಗೆ ಸಲ್ಲಬೇಕು ಎಂಬ ಚರ್ಚೆ ನಡೆದಿದೆ. ಇದರ ನಡುವೆಯೇ ಕೇಂದ್ರ ಸಚಿವ, ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಧಾರವಾಡದ ಐಐಟಿ ವಿಚಾರವನ್ನು ಎತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರ ಭಾನುವಾರ ಧಾರವಾಡದ ಐಐಟಿ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ಐಐಟಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ತಯಾರಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು, "ಬೆಂಗಳೂರು-ಮೈಸೂರು ದಶಪಥ ರಸ್ತೆ, ಧಾರವಾಡ ಐಐಟಿ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು. ಸಿದ್ದರಾಮಯ್ಯ ಸತ್ಯ ಹೇಳಲಿ" ಎಂದು ಸವಾಲು ಹಾಕಿದರು.

"ಧಾರವಾಡದ ಐಐಟಿ ಸ್ಥಾಪನೆಗೆ ಸಿದ್ದರಾಮಯ್ಯ ತಮ್ಮ ಸರ್ಕಾರದ ಅವಧಿಯಲ್ಲಿ ಜಾಗ ಕೊಡದೇ ತೊಂದರೆ ಕೊಟ್ಟು ಅಡ್ಡಿಪಡಿಸಿದ್ದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ಆದರೆ, ಆರ್. ವಿ. ದೇಶಪಾಂಡೆಯವರು ಕೈಗಾರಿಕಾ ಸಚಿವರಾಗಿ ಸಹಕಾರ ನೀಡಿ ಜಾಗ ಕೊಟ್ಟರು. ಎಲ್ಲಾ ಫೈನಲ್ ಆದ ಮೇಲೆಯೂ ಸಿದ್ದರಾಮಯ್ಯ ಖ್ಯಾತೆ ತೆಗೆದಿದ್ದರು. ಕೇಂದ್ರ ಬಿಜೆಪಿ ಸರ್ಕಾರ ಐಐಟಿ ಸ್ಥಾಪನೆಗೆ ಸಂಪೂರ್ಣ ಸಹಕಾರ ನೀಡಿ ಯೋಜನೆ ಅನುಷ್ಠಾನಗೊಳಿಸಿದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದರು.
"ಬೆಂಗಳೂರು-ಮೈಸೂರು ದಶಪಥ ರಸ್ತೆಯ ವಿಚಾರದಲ್ಲೂ ಸಿದ್ದರಾಮಯ್ಯ ಸರ್ಕಾರ ಏನೂ ಮಾಡಲಿಲ್ಲ. ಯೋಜನೆ ಅನುಷ್ಠಾನಕ್ಕೆ ಸಂಪೂರ್ಣ ಹಣ ಕೊಟ್ಟಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್‌ನವರ ವಾದ ಹೇಗಿದೆ ಅಂದರೆ ತಾವು ಏನೂ ಮಾಡಿರಲಿಲ್ಲ. ಹೀಗಾಗಿ ಈ ಕಾರ್ಯಗಳು ಬಿಜೆಪಿ ಕಾಲದಲ್ಲಾಗಿವೆ. ನಾವು ಮಾಡಿದರೆ ಬಿಜೆಪಿಯವರಿಗೆ ಹೇಗೆ ಕ್ರೆಡಿಟ್ ಸಿಗುತ್ತಿತ್ತು ಅನ್ನೋ ರೀತಿಯಲ್ಲಿದೆ" ಎಂದು ಜೋಶಿ ಟೀಕಿಸಿದರು.

"ಸಿದ್ದರಾಮಯ್ಯ ರಾಹುಲ್ ಗಾಂಧಿ ರೀತಿ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡಿಸಿರುವ ಪ್ರಬುದ್ಧ ರಾಜಕಾರಣಿ ಮೆಚ್ಯುರ್ ರೀತಿಯಲ್ಲೇ ಮಾತಾಡಲಿ. ಸಣ್ಣತನದಿಂದ ಮಾತನಾಡುವುದನ್ನು ಸಿದ್ದರಾಮಯ್ಯ ಅವರು ಬಿಡಲಿ. ರಾಹುಲ್ ಗಾಂಧಿ ಇಂಥಹ ಹೇಳಿಕೆ ನೀಡಿದರೆ, ಪಾಪ ತಿಳುವಳಿಕೆ ಇಲ್ಲ ಅಂತಾ ನಾವು ಕನಿಕರ ತೋರಿಸಬಹುದು. ಆದರೆ ಸಿದ್ದರಾಮಯ್ಯ ಅವರಿಗೆ ಯಾವ ಕನಿಕರ ತೋರಿಸುವ ಅಗತ್ಯತೆ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂತಹ ಹೇಳಿಕೆ ನೀಡುವುದು ಹಾಸ್ಯಾಸ್ಪದ" ಎಂದು ಕುಟುಕಿದರು.
ಐಐಟಿ ಕಟ್ಟಡ ಉದ್ಘಾನೆ; ಮಾರ್ಚ್ 12ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಐಐಟಿ ಧಾರವಾಡದ ನೂತನ ಕಟ್ಟಡದ ಲೋಕಾರ್ಪಣೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮಧ್ಯಾಹ್ನ 2 ಗಂಟೆಗೆ ಧಾರವಾಡಕ್ಕೆ ಆಗಮಿಸಲಿದ್ದಾರೆ. ಐಐಟಿ ಕ್ಯಾಂಪಸ್, ಬೇಲೂರು ಕೈಗಾರಿಕಾ ಪ್ರದೇಶ, ಧಾರವಾಡ ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಮಂಡ್ಯದಲ್ಲಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ದಶಪಥ ರಸ್ತೆ ಲೋಕಾರ್ಪಣೆ ಮಾಡಲಿದ್ದಾರೆ.
ಐಐಟಿ ಧಾರವಾಡ ಕ್ಯಾಂಪಸ್‌ನ ನೂತನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 10, 2019ರಂದು ಶಂಕುಸ್ಥಾಪನೆ ಮಾಡಿದ್ದರು. ಈಗ ಕಟ್ಟಡ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. 470 ಎಕರೆ ವಿಶಾಲವಾದ ಜಾಗದಲ್ಲಿ ಅಂದಾಜು 851.88 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. 'ನಾಲೆಡ್ಜ್ ಸೆಂಟರ್' ನಿರ್ಮಾಣ ಮಾಡಲಾಗಿದ್ದು, 5000ಕ್ಕಿಂತ ಹೆಚ್ಚು ಪುಸ್ತಕಗಳು ಹಾಗೂ 8,500ಕ್ಕೂ ಹೆಚ್ಚು ಸಂಶೋಧನೆಗೆ ಸಂಬಂಧಿಸಿದ ಜರ್ನಲ್‌ಗಳು ಲಭ್ಯವಿವೆ.
ಏಳು ವಿಭಾಗಗಳಲ್ಲಿ ಬಿಟೆಕ್, ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‌ಡಿ ಅಧ್ಯಯನ ಮಾಡುವ ಅವಕಾಶ ಇಲ್ಲಿದೆ. ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದಿರುವ ಧಾರವಾಡಕ್ಕೆ ಐಐಟಿಯ ಅತ್ಯಾಧುನಿಕ ಕಟ್ಟಡ ಮತ್ತೊಂದು ಗರಿಯಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡದ ಹೆಸರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ರೀತಿಯಲ್ಲಿ ಪರಿಚಯವಾಗಲು ಐಐಟಿ ಕಾರಣವಾಗಲಿದೆ.












Click it and Unblock the Notifications